ಸರ್ವಜ್ಞ ಜಯಂತಿ ಬಗ್ಗೆ ಮಾಹಿತಿ ನೀಡದೆ ಕಡೆಗಣನೆ : ಕುಲಾಲ ಕುಂಬಾರರ ಸಮಾಜ ಆರೋಪ
ಮಡಿಕೇರಿ ಫೆ.18 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಫೆ.20 ರಂದು ಮಡಿಕೇರಿಯಲ್ಲಿ ನಡೆಯುವ ಸರ್ವಜ್ಞ ಜಯಂತಿಯ ಬಗ್ಗೆ ಕುಲಾಲ ಕುಂಬಾರರ ಸಮಾಜಕ್ಕೆ ಯಾವುದೇ ಮಾಹಿತಿಯನ್ನು ನೀಡದೆ ನಿರ್ಲಕ್ಷಿಸಲಾಗಿದೆ ಎಂದು ಕೊಡಗು ಜಿಲ್ಲಾ ಕುಲಾಲ ಕುಂಬಾರರ ಸಮಾಜದ ಅಧ್ಯಕ್ಷ ಎಂ.ಡಿ.ನಾಣಯ್ಯ ಆರೋಪಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಶ್ರೀ ಸರ್ವಜ್ಞ ಅವರು ಕುಂಬಾರ ಜನಾಂಗಕ್ಕೆ ಸೇರಿದವರಾಗಿದ್ದು, ಆಹ್ವಾನ ಪತ್ರಿಕೆಯಲ್ಲಿ ಕುಂಬರ ಜನಾಂಗದ ಹೆಸರನ್ನು ಬಳಸದೇ ಇರುವುದು ಖಂಡನೀಯ. ಪ್ರತಿವರ್ಷ ಸರ್ವಜ್ಞ ಜಯಂತಿ ಕಾರ್ಯಕ್ರಮಕ್ಕೆ ಕುಲಾಲ ಕುಂಬಾರರ ಸಮಾಜದ ಪ್ರಮುಖರನ್ನು ಆಹ್ವಾನಿಸಲಾಗುತ್ತಿತ್ತು. ಆದರೆ ಈ ಬಾರಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಯಾವುದೇ ಮಾಹಿತಿಯನ್ನು ಸಮಾಜಕ್ಕೆ ನೀಡಲಿಲ್ಲ. ಅಲ್ಲದೆ ಕಾರ್ಯಕ್ರಮದ ಪೂರ್ವಭಾವಿ ಸಭೆಗೆ ಆಹ್ವಾನಿಸದೆ ಮತ್ತು ಆಹ್ವಾನ ಪತ್ರಿಕೆಯಲ್ಲಿ ಸಮಾಜದ ಹೆಸರನ್ನು ಬಳಸದೆ ಕುಂಬಾರ ಜನಾಂಗವನ್ನು ನಿರ್ಲಕ್ಷಿಸಿದ್ದಾರೆ ಎಂದು ದೂರಿದ್ದಾರೆ.
ಕುಂಬಾರ ಸಮಾಜವನ್ನು ಕಡೆಗಣಿಸಿರುವುದರಿಂದ ಸೋಮವಾರ ನಡೆಯುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದೆ ಇರಲು ನಿರ್ಧರಿಸಿರುವುದಾಗಿ ನಾಣಯ್ಯ ತಿಳಿಸಿದ್ದಾರೆ.
ಇಲಾಖೆಯಿಂದ ಈ ರೀತಿಯ ತಪ್ಪುಗಳು ಹಲವು ಬಾರಿ ನಡೆದಿದ್ದು, ಮುಂದಿನ ದಿನಗಳಲ್ಲಿ ಸಮಾಜದ ಕಡೆಗಣನೆಯನ್ನು ಖಂಡಿಸಿ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.
