ಸಿದ್ದರಾಮಯ್ಯರ ವಿರುದ್ಧದ ಹೇಳಿಕೆ ಖಂಡನೀಯ : ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕ ಅಸಮಾಧಾನ
ಮಡಿಕೇರಿ ಫೆ.18 : ವಿರೋಧದ ಪಕ್ಷದ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಸಚಿವ ಅಶ್ವಥ ನಾರಾಯಣ ಅವರು ನೀಡಿರುವ ಹೇಳಿಕೆ ಖಂಡನೀಯವೆoದು ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಎಂ.ಎ.ಉಸ್ಮಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಸಿದ್ದರಾಮಯ್ಯರ ಕುರಿತು ಸಚಿವರು ನೀಡಿರುವ ಪ್ರಚೋದನಾಕಾರಿ ಹೇಳಿಕೆ ಬಿಜೆಪಿಯ ಹೊಡಿ, ಬಡಿ ಸಂಸ್ಕೃತಿಯನ್ನು ಪ್ರತಿಬಿಂಬಿಸಿದೆ ಎಂದು ಟೀಕಿಸಿದ್ದಾರೆ.
ರಾಜಕೀಯ ಲಾಭಕ್ಕಾಗಿ ಇತಿಹಾಸವನ್ನು ಕೆಣಕಿ ಕ್ಷುಲ್ಲಕ ರಾಜಕಾರಣವನ್ನು ಮಾಡಲಾಗುತ್ತಿದೆ. ದೇಶದ ಭವಿಷ್ಯಕ್ಕೆ ಏನು ಬೇಕು ಎಂದು ಚಿಂತನೆ ಮಾಡದೆ ಆಗಿ ಹೋದ ಘಟನಾವಳಿಗಳನ್ನು ತಿರುಚಿ ರಾಜಕೀಯ ಬೇಳೆ ಬೇಯಿಸಿಕೊಳ್ಳಲಾಗುತ್ತಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಇರುವ ಜನಪ್ರಿಯತೆಯನ್ನು ಸಹಿಸಲಾಗದೆ ಸೋಲಿನ ಹತಾಶೆಯಲ್ಲಿರುವ ಬಿಜೆಪಿ ಮುಖಂಡರು ಬಾಲಿಶ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಸಚಿವ ಅಶ್ವಥ ನಾರಾಯಣ ಅವರ ವಿರುದ್ಧ ಪೊಲೀಸರು ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ಮುಖ್ಯಮಂತ್ರಿಗಳು ಸಂಪುಟದಿಂದ ಕೈಬಿಡಬೇಕೆಂದು ಒತ್ತಾಯಿಸಿದ್ದಾರೆ.
::: ಕೊಡಗಿನ ನಿರ್ಲಕ್ಷ್ಯ :::
ಮುಖ್ಯಮಂತ್ರಿ ಬಸವರಾಜು ಬೊಮ್ಮಾಯಿ ಅವರು ಮಂಡಿಸಿರುವ ಬಜೆಟ್ ನಲ್ಲಿ ಕೊಡಗು ಜಿಲ್ಲೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಕೇವಲ 100 ಕೋಟಿ ರೂ.ಗಳನ್ನು ನೀಡಿ ಕಣ್ಣೊರೆಸುವ ತಂತ್ರ ಮಾಡಲಾಗಿದೆ ಎಂದು ಉಸ್ಮಾನ್ ಆರೋಪಿಸಿದ್ದಾರೆ.
ಜಿಲ್ಲೆಯ ಎಲ್ಲಾ ರಸ್ತೆಗಳು ಸಂಪೂರ್ಣವಾಗಿ ಹದಗೆಟ್ಟಿದ್ದು, ಅಲ್ಪ ಪ್ರಮಾಣದ ಅನುದಾನದಿಂದ ಅಭಿವೃದ್ಧಿ ಕಾರ್ಯ ಸಾಧ್ಯವಿಲ್ಲ. ಇದು ಚುನಾವಣಾ ಗಿಮಿಕ್ ನ ಪ್ಯಾಕೇಜ್ ಆಗಿದ್ದು, ಈ ಬಾರಿ ಜಿಲ್ಲೆಯ ಮತದಾರರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
ಬಿಜೆಪಿಗೆ ಸರ್ಕಾರ ರಚನೆ ಮಾಡಲು ಮಾತ್ರ ಕೊಡಗಿನ ಶಾಸಕರುಗಳಿದ್ದರೆ ಸಾಕು, ಆದರೆ ಕೊಡಗಿನ ಅಭಿವೃದ್ಧಿ ಬೇಡ ಎನ್ನುವುದಕ್ಕೆ ಭರವಸೆಗಳನ್ನು ಹುಸಿ ಮಾಡಿದ ಈ ಬಜೆಟ್ ಸಾಕ್ಷಿಯಾಗಿದೆ ಎಂದು ಟೀಕಿಸಿದ್ದಾರೆ.
ತಕ್ಷಣ ಸರ್ಕಾರ ಜಿಲ್ಲೆಯ ರಸ್ತೆ ಹಾಗೂ ಸೇತುವೆಗಳ ಸಮಗ್ರ ಅಭಿವೃದ್ಧಿಗೆ ಒಂದು ಸಾವಿರ ಕೋಟಿ ರೂ.ಗಳನ್ನು ಬಿಡುಗಡೆ ಮಾಡಬೇಕೆಂದು ಉಸ್ಮಾನ್ ಒತ್ತಾಯಿಸಿದ್ದಾರೆ.
