Advertisement
5:06 AM Friday 8-December 2023

ಪಕ್ಷಾಂತರಿಗಳನ್ನು ಜನ ನಂಬುವುದಿಲ್ಲ

23/02/2023

ಮಡಿಕೇರಿ ಫೆ.23 : ಜಾತ್ಯತೀತ ಜನತಾದಳದಲ್ಲಿ ಉನ್ನತ ಸ್ಥಾನಗಳನ್ನು ಪಡೆದು ರಾಜಕೀಯವಾಗಿ ಬೆಳೆದ ಸಂಕೇತ್ ಪೂವಯ್ಯ ಅವರು ಇದೀಗ ಪಕ್ಷ ತೊರೆದು ಕಾಂಗ್ರೆಸ್ ಗೆ ಸೇರ್ಪಡೆಯಾಗಿರುವುದು ಸರಿಯಾದ ಕ್ರಮವಲ್ಲ. ಪಕ್ಷಾಂತರಿಗಳನ್ನು ಜನ ಎಂದಿಗೂ ನಂಬುವುದಿಲ್ಲ ಎಂದು ಜೆಡಿಎಸ್ ಪರಿಶಿಷ್ಟ ಘಟಕದ ಪ್ರಮುಖ ಹೆಚ್.ಎನ್.ಯೋಗೇಶ್ ಕುಮಾರ್ ಟೀಕಿಸಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜೆಡಿಎಸ್ ಪಕ್ಷ ಸಂಕೇತ್ ಪೂವಯ್ಯ ಅವರಿಗೆ ಎಲ್ಲವನ್ನೂ ನೀಡಿದೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸುವ ಅವಕಾಶಗಳಿತ್ತು. ಆದರೆ ದುಡುಕಿನ ನಿರ್ಧಾರದ ಮೂಲಕ ಸೋಲಿನ ಸರಮಾಲೆಯ ಕಾಂಗ್ರೆಸ್ ಪಕ್ಷವನ್ನು ಸೇರಿಕೊಂಡಿದ್ದಾರೆ. ಇದರಿಂದ ಅವರಿಗೆ ನಷ್ಟವಾಗುತ್ತದೆಯೇ ಹೊರತು ಜೆಡಿಎಸ್ ಗೆ ಯಾವುದೇ ರೀತಿಯಲ್ಲಿ ಹಿನ್ನಡೆಯಾಗುವುದಿಲ್ಲವೆಂದು ಅಭಿಪ್ರಾಯಪಟ್ಟಿದ್ದಾರೆ.
ಪಕ್ಷನಿಷ್ಠೆ ಇರುವ ಕಾರ್ಯಕರ್ತರು ಇಂದಿಗೂ ಜೆಡಿಎಸ್ ಜೊತೆಯಲ್ಲಿದ್ದಾರೆ. ಹೆಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಗಳಾಗಿದ್ದಾಗ ಕೊಡಗು ಜಿಲ್ಲೆಯ ಸಂಕಷ್ಟಕ್ಕೆ ಪ್ರಾಮಾಣಿಕವಾಗಿ ಸ್ಪಂದಿಸಿದ್ದಾರೆ. ಮಳೆಹಾನಿ ಸಂತ್ರಸ್ತರಿಗೆ 800 ಕ್ಕೂ ಅಧಿಕ ಮನೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ. ರೈತರ ಸಾಲಮನ್ನಾ ಮಾಡಿದ್ದಾರೆ. ಇದು ಯಾವುದನ್ನೂ ಜಿಲ್ಲೆಯ ಜನ ಮರೆತಿಲ್ಲ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಜೆಡಿಎಸ್ ಪರವಾಗಿದ್ದಾರೆ. ಕಾಂಗ್ರೆಸ್ ಗೆಲ್ಲುತ್ತದೆ ಎನ್ನುವ ಭ್ರಮೆಯಲ್ಲಿ ಯಾರೂ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳಬಾರದು ಎಂದು ಯೋಗೇಶ್ ಕುಮಾರ್ ತಿಳಿಸಿದ್ದಾರೆ.