*ವಿರಾಜಪೇಟೆ : ನಿವೃತ್ತ ಶಿಕ್ಷಣಾಧಿಕಾರಿ ಶ್ರೀಶೈಲ ಬೀಳಗಿ ಗೆ ಸನ್ಮಾನ*

ವಿರಾಜಪೇಟೆ ಜೂ.3 : ಕಳೆದ ನಾಲ್ಕು ವರ್ಷಗಳಿಂದ ವಿರಾಜಪೇಟೆ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿ ನಿವೃತ್ತಿ ಹೊಂದಿರುವ ಶ್ರೀಶೈಲ ಬೀಳಗಿ ಅವರನ್ನು ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆ ವಿಭಾಗದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಶ್ರೀಶೈಲ ಬೀಳಗಿ, ವಿದ್ಯಾರ್ಥಿಗಳ ಮುಂದಿನ ಜೀವನವು ಉತ್ತಮವಾಗಿ ರೂಪುಗೊಳ್ಳುವುದರಲ್ಲಿ ಶಿಕ್ಷಣದ ಪಾತ್ರವು ಬಹುಮುಖ್ಯವಾದುದ್ದು. ಮಕ್ಕಳ ವಿದ್ಯಾಭ್ಯಾಸಕ್ಕೆ ಪೋಷಕರು ಅವಿರತ ಶ್ರಮಪಟ್ಟು ಶಾಲೆಗೆ ಕಳಿಸುತ್ತಾರೆ. ಇದನ್ನರಿತ ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಶಿಕ್ಷಣ ಪಡೆದು ಶಾಲೆಗೂ ಪೋಷಕರಿಗೂ ತಮ್ಮ ನಾಡಿಗೂ ಕೀರ್ತಿ ತರುವಂತಾಗಬೇಕು ಎಂದು ಸಲಹೆ ನೀಡಿದರು.
ವಿದ್ಯೆ ಇದ್ದರೆ ನಾವು ಏನನ್ನೂ ಬೇಕಾದರೂ ಸಾಧನೆ ಮಾಡಬಹುದು. ವಿದ್ಯೆಯೊಂದಿಗೆ ವಿನಯವೂ ಅತಿ ಮುಖ್ಯ. ವಿದ್ಯಾರ್ಥಿಗಳಿಗೆ ಗುರುವಿನೊಂದಿಗೆ ಗುರಿಯೂ ಇರಬೇಕು ಎಂದರು.
ಇತ್ತೀಚಿಗೆ ವಿದ್ಯಾರ್ಥಿಗಳು ಮೊಬೈಲ್ ಗೀಳು ಹಾಗೂ ದುಶ್ಚಟಗಳಿಗೆ ದಾಸರಾಗುತ್ತಿದ್ದಾರೆ. ಅದನ್ನು ಆದಷ್ಟು ಕಡಿಮೆ ಮಾಡಿ ಓದಿನತ್ತ ಗಮನ ಹರಿಸಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಎಸ್‍ಎಸ್‍ಎಲ್‍ಸಿ ಪರೀಕ್ಷೆ ಫಲಿತಾಂಶದಲ್ಲಿ ಶೆ.100 ಫಲಿತಾಂಶ ಪಡೆದ ಕಾರಣರಾದ ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವೃಂದದವರನ್ನು ಅಭಿನಂದಿಸಿದರು.
ಈ ಸಂದರ್ಭ ಎಸ್‍ಡಿಎಂಸಿ ಅಧ್ಯಕ್ಷರು, ಸದಸ್ಯರು, ಶಾಲಾ ಅಭಿವೃದ್ದಿ ಸಮಿತಿಯ ಆಶಾ ಸುಬ್ಬಯ್ಯ ಸೇರಿದಂತೆ ಉಪ ಪ್ರಾಂಶುಪಾಲರು, ಶಿಕ್ಷಕ ವೃಂದದವರು, ವಿದ್ಯಾರ್ಥಿಗಳು ಇದ್ದರು.
