Advertisement
9:36 AM Sunday 3-December 2023

*ಅ.7, 8 ‘ದೇಸಿ ಜಗಲಿ’ ಕಥಾ ಕಮ್ಮಟ*

01/10/2023

ಮಡಿಕೇರಿ, ಅ.1 : ವೀರಲೋಕ ಪ್ರಕಾಶನದ ಪ್ರಾಯೋಜಕತ್ವದಲ್ಲಿ, ಕರ್ನಾಟಕ ಜಾನಪದ ಪರಿಷತ್, ಕೊಡಗು ಜಿಲ್ಲಾ ಘಟಕ ಹಾಗೂ ಕನ್ನಡ ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಮಡಿಕೇರಿಯಲ್ಲಿ ಅಕ್ಟೋಬರ್ 7 ಮತ್ತು 8 ರಂದು ಕಥಾ ಕಮ್ಮಟ ನಡೆಯಲಿದೆ ಎಂದು ಜಿಲ್ಲಾ ಸಂಚಾಲಕ ಬಿ.ಜಿ. ಅನಂತ ಶಯನ ಹೇಳಿದ್ದಾರೆ.
ಕಥಾ ಕಮ್ಮಟವು ಅ. 7 ರಂದು ಜೂನಿಯರ್ ಕಾಲೇಜು ಸಭಾಂಗಣದಲ್ಲಿ, ವೀರಲೋಕ ಪ್ರಕಾಶನದ ಮಾಲೀಕ ವೀರಕಪುತ್ರ ಎಂ. ಶ್ರೀನಿವಾಸ ಉದ್ಘಾಟಿಸಲಿದ್ದಾರೆ.
ಹಿರಿಯ ಸಾಹಿತಿ, ಉಪನ್ಯಾಸಕ ಮೋಹನ್ ಬಾಳೇಗಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ಶಿಬಿರ ನಿರ್ದೇಶಕ, ಉಪನ್ಯಾಸಕ, ಬರಹಗಾರ ಪ್ರಭಾಕರ ಶಿಶಿಲ, ಕನ್ನಡ ಸಂಸ್ಕೃತಿ ಇಲಾಖೆಯ ಉಪನಿರ್ದೇಶಕ ಚಿನ್ನಸ್ವಾಮಿ, ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪಿ.ಆರ್. ವಿಜಯ ಭಾಗವಹಿಸುತ್ತಾರೆ.ವೀರಲೋಕ ಪ್ರಕಾಶನವು ಕರ್ನಾಟಕದ ಎಲ್ಲ ಜಿಲ್ಲೆಗಳಲ್ಲೂ ಕಥಾ ಕಮ್ಮಟ ನಡೆಸುತ್ತಿದ್ದು, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಯಶಸ್ವಿಯಾಗಿ ನಡೆದಿದೆ. ಕಮ್ಮಟದಲ್ಲಿ ಶಿಬಿರಾರ್ಥಿಗಳಾಗಿ ಉದಯೋನ್ಮುಖ ಬರಹಗಾರರೊಂದಿಗೆ, ಯುವ ಪೀಳಿಗೆಯಲ್ಲೂ ಬರಹ ಜಾಗೃತಿ ಮೂಡಿಸುವುದು ವೀರಲೋಕದ ಉದ್ದೇಶವಾಗಿದೆ.
ಶಿಬಿರದ ತರಬೇತುದಾರರಾಗಿ ಡಾ. ಪ್ರಭಾಕರ ಶಿಶಿಲ ಆಗಮಿಸುತ್ತಿದ್ದಾರೆ. ಶಿಶಿಲ ಅವರು ನಿವೃತ್ತ ಉಪನ್ಯಾಸಕರಾಗಿದ್ದು ಕಥಾ ಸಂಕಲನ, ಕಾದಂಬರಿಗಳು, ಪ್ರವಾಸಿ ಕಥನ, ಯಕ್ಷಗಾನ, ನಾಟಕ ಸಾಹಿತ್ಯ, ಸಂಶೋಧನಾ ಕೃತಿಗಳು ಇತ್ಯಾದಿ ಹತ್ತಾರು ಪುಸ್ತಕಗಳನ್ನು ಬರೆದು ಜನಪ್ರಿಯರಾಗಿದ್ದಾರೆ. ಶಿಶಿಲ ಅವರಿಗೆ ಹಲವು ಪ್ರಶಸ್ತಿಗಳು ದೊರೆತಿದ್ದು, ಅವರ ಕುರಿತ ಪುಸ್ತಕಗಳೂ ಪ್ರಕಟಗೊಂಡಿವೆ.
ಶಿಬಿರವು ಅ. 7 ರಂದು ಬೆಳಿಗ್ಗೆ 10 ಗಂಟೆಗೆ ಉದ್ಘಾಟನೆಗೊಳ್ಳಲಿದೆ. ತಾ. 8 ರಂದು ಮಧ್ಯಾಹ್ನ 3 ಗಂಟೆಗೆ ಸಮಾರೋಪ ನಡೆಯಲಿದೆ. ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಭಾರದ್ವಾಜ್ ಕೆ. ಆನಂದತೀರ್ಥ ಅವರು ಪಾಲ್ಗೊಳ್ಳಲಿದ್ದಾರೆ.