ಮಡಿಕೇರಿ ಡಿ.31 : ಶಿಕ್ಷಣ ಸಚಿವರು ಚೆಕ್ ಅಮಾನ್ಯ ಪ್ರಕರಣದಲ್ಲಿ ತಪ್ಪಿತಸ್ಥರಾಗಿದ್ದಾರೆ. ಈ ಪ್ರಕರಣದ ಪ್ರಚಾರ ತಡೆಯಲು ನನ್ನ ತಮ್ಮನ ಪ್ರಕರಣಕ್ಕೆ ಸರಕಾರ ಗಮನ ನೀಡಿದೆ ಎಂದು ಸಂಸದ ಪ್ರತಾಪ್ ಸಿಂಹ ಆರೋಪಿಸಿದ್ದಾರೆ.
ನಾಪೋಕ್ಲುವಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರತಾಪ್ ಸಿಂಹ ಮರ ಕಳ್ಳತನ ಪ್ರಕರಣದಲ್ಲಿ ಎಫ್ಐಆರ್ನಲ್ಲಿ ಸಹೋದರನ ಹೆಸರು ಇಲ್ಲದಿದ್ದರೂ ಆತನನ್ನು ವಶಕ್ಕೆ ಪಡೆಯಲಾಗಿದೆ. ನನ್ನನ್ನು ಹಣಿಯಲು ನನ್ನ ಕುಟುಂಬವನ್ನು ಟಾರ್ಗೆಟ್ ಮಾಡಿದ್ದಾರೆ. ಇದೆಂತಹ ದ್ವೇಷ ರಾಜಕಾರಣ ಎಂದು ಪ್ರತಾಪ್ ಸಿಂಹ ಸಿಂಹ ಪ್ರಶ್ನಿಸಿದರು.
ಕೊಡಗು- ಮೈಸೂರು ಕ್ಷೇತ್ರದಲ್ಲಿ ನನ್ನನ್ನು ಸೋಲಿಸಿ ಪುತ್ರ ಯತೀಂದ್ರನನ್ನು ಗೆಲ್ಲಿಸಲು ಸಿದ್ದರಾಮಯ್ಯ ಪ್ಲಾನ್ ಮಾಡಿದ್ದಾರೆ. ಆದ್ರೆ ಈ ಷಡ್ಯಂತ್ರ ಫಲಿಸುವುದಿಲ್ಲ. ಕಾವೇರಿ ಮಾತೆ ಆಶೀರ್ವಾದ ಮತ್ತು ಕೊಡಗು-ಮೈಸೂರು ಮತದಾರರ ನಂಬಿಕೆ ನನ್ನ ಮೇಲಿದೆ. ಹೀಗಾಗಿ ಅತ್ಯಧಿಕ ಮತಗಳಿಂದ ಗೆಲ್ಲುವೆ. ಇದು ಗೊತ್ತಿದ್ದೇ ತನ್ನ ವಿರುದ್ದ ಕಾಂಗ್ರೆಸ್ ಷಡ್ಯಂತ್ರ ಹೂಡಿ ಇಲ್ಲಸಲ್ಲದ ಆರೋಪ ಮಾಡುತ್ತಿದೆ ಎಂದು ಪ್ರತಾಪ್ ಸಿಂಹ ಆರೋಪಿಸಿದರು.








































