
ವಿರಾಜಪೇಟೆ ಜು.4 NEWS DESK : ಕಾಡಾನೆಯೊಂದು ಕಾಫಿ ತೋಟದೊಳಗೆ ನುಗ್ಗಿ ದಾಂಧಲೆ ನಡೆಸಿ ಅಪಾರ ಪ್ರಮಾಣದಲ್ಲಿ ಕೃಷಿ ಫಸಲು ನಾಶಗೊಳಿಸಿದ ಘಟನೆ ಒಂದನೇ ರುದ್ರಗುಪ್ಪೆಯಲ್ಲಿ ನಡೆದಿದೆ.
ಬಿಟ್ಟಂಗಾಲ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಂದನೇ ರುದ್ರಗುಪ್ಪೆ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟಿದ್ದ ಒಂಟಿ ಸಲಗ ದಾಂಧಲೆ ನಡೆಸಿ ಗ್ರಾಮದ ಎ.ಹೆಚ್. ಸರಸ್ವತಿ ಮತ್ತು ಟೋಮಿ ಎಂಬುವವರಿಗೆ ಸೇರಿದ ತೋಟಗಳಲ್ಲಿನ ಕಾಫಿ ಗಿಡಗಳು, ಅಡಿಕೆ, ತೆಂಗು, ಬಾಳೆ ಎಲ್ಲವನ್ನು ದ್ವಂಸಗೊಳಿಸಿವೆ. ಅಲ್ಲದೆ ವಿದ್ಯುತ್ ಪರಿವರ್ತಕದಿಂದ ಕೊಳವೆ ಬಾವಿಗೆ ಸಂಪರ್ಕ ಕಲ್ಪಿಸುವ ವಿದ್ಯುತ್ ತಂತಿಯನ್ನು ತುಂಡರಿಸಿದೆ. ಇದರಿಂದ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದ್ದು, ವಿದ್ಯುತ್ ಪೂರೈಕೆಯಾಗುವ ತಂತಿ ನೆಲದ ಮೇಲೆ ಬಿದ್ದಿರುವ ಕಾರಣ ಕೆಲಸಕ್ಕೆ ತೆರಳುವ ಕಾರ್ಮಿಕರು ಹಿಂದೇಟು ಹಾಕುತ್ತಿದ್ದಾರೆ.








