
ಮಡಿಕೇರಿ ಫೆ.1 NEWS DESK : ಮಾದಾಪುರ ಅರಣ್ಯ ವಲಯದ ಕಾಜೂರಿನಲ್ಲಿ ಸಾರ್ವಜನಿಕರಿಗೆ, ಸ್ಥಳೀಯ ನಿವಾಸಿಗಳಿಗೆ, ವಾಹನ ಸವಾರರಿಗೆ ಆತಂಕ ಮೂಡಿಸಿದ ಕಾಜೂರು ಕರ್ಣ (40) ಎಂದೇ ಖ್ಯಾತಿ ಪಡೆದಿದ್ದ ಕಾಡಾನೆಯನ್ನು ಇಂದು ಅರಣ್ಯ ಇಲಾಖೆ ಸಿಬ್ಬಂದಿಗಳು ಯಶಸ್ವಿಯಾಗಿ ಸೆರೆಹಿಡಿದರು. ಎಲಿಪ್ಯಾಂಟ್ ಟಾಸ್ಕ್ ಫೋರ್ಸ್(ಇಟಿಎಫ್) ಮತ್ತು ರ್ಯಾಪಿಡ್ ರೆಸ್ಪಾನ್ಸ್ ಟೀಮ್ (ಆರ್‍ಆರ್‍ಟಿ) ಸಿಬ್ಬಂದಿಗಳು ಯಡವನಾಡು, ಜೇನುಕಲ್ಲುಬೆಟ್ಟ, ಮಾಲಂಬಿ, ನಿಡ್ತ, ಹರದೂರು ಮೀಸಲು ಅರಣ್ಯದಲ್ಲಿ ನಿರಂತರ ಹುಡುಕಾಟ ನಡೆಸುತ್ತಿದ್ದರು. ಶುಕ್ರವಾರ ಕಾಜೂರು ಅರಣ್ಯದಲ್ಲಿ ಕಾಜೂರು ಕರ್ಣನನ್ನು ಗುರುತಿಸಿದ ಸಿಬ್ಬಂದಿ, ಶನಿವಾರ ಬೆಳಿಗ್ಗೆ ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದಾರೆ. ಅರವಳಿಕೆ ತಜ್ಞರಾದ ರಮೇಶ್, ಚಿಟ್ಟಿಯಪ್ಪ, ಶಾರ್ಪ್ ಶೂಟರ್ ರಂಜನ್ ಹಾಗೂ ಅರಣ್ಯಾಧಿಕಾರಿಗಳ ತಂಡ ಶನಿವಾರ ಬೆಳಿಗ್ಗೆ 4 ಗಂಟೆಗೆ ಕಾರ್ಯಾಚರಣೆ ಪ್ರಾರಂಭಿಸಿದ್ದಾರೆ. 7.45ಕ್ಕೆ ಕಾಜೂರು ಜಂಕ್ಷನ್ ಬಳಿಯೆ ಬಂದ ಕಾಡಾಣೆ ಅರಣ್ಯ ಇಲಾಖೆಯ ಜೀಪಿನ ಮೇಲೆ ದಾಳಿಗೆ ಮುಂದಾಗಿದ್ದು, ತಕ್ಷಣವೇ ಶಾರ್ಪ್ ಶೂಟರ್ ರಂಜನ್ ಡಾಟ್ ಮಾಡಿದ್ದಾರೆ. ದುಬಾರೆಯ ಸಾಕಾನೆ ಕ್ಯಾಂಪ್‍ನ ಹರ್ಷ, ಪ್ರಶಾಂತ, ಸುಗ್ರಿವಾ, ಧನುಂಜಯ ಮತ್ತು ಜಯ ಮಾರ್ತಂಡ ಹೆಸರಿನ ಸಾಕಾನೆಗಳು ಕಾಜೂರು ಕರ್ಣನನ್ನು ತಮ್ಮ ವಶಕ್ಕೆ ತೆಗೆದುಕೊಂಡು ಲಾರಿಗೆ ಹತ್ತಿಸಿದವು.
ಶಾಸಕ ಡಾ.ಮಂತರ್ ಗೌಡ ಭೇಟಿ : ಶಾಸಕ ಡಾ.ಮಂತರ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಡಿಎಫ್‍ಓ ಭಾಸ್ಕರ್ ಅವರಿಂದ ಮಾಹಿತಿ ಪಡೆದುಕೊಂಡರು. ಇದೇ ಸಂದರ್ಭ ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳನ್ನು ಅಭಿನಂದಿಸಿದರು. ಎಸಿಎಫ್ ಗೋಪಾಲ್, ಆರ್‍ಎಫ್‍ಒ ಶೈಲೇಂದ್ರ ಕುಮಾರ್ ಇದ್ದರು.











