
ಮಡಿಕೇರಿ ಫೆ.10 : ಕಟ್ಟೆಮಾಡು ಶ್ರೀ ಮಹಾ ಮೃತ್ಯುಂಜಯ ಮಾದೇಶ್ವರ ದೇವಾಲಯದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿನಾ ಕಾರಣ ನನ್ನ ವಿರುದ್ಧ ಆರೋಪ ಹೊರಿಸಿ ತೇಜೋವಧೆ ಮಾಡಬೇಡಿ ಎಂದು ದೇವಾಲಯದ ಪ್ರಧಾನ ಅರ್ಚಕ ವಿಘ್ನೇಶ್ ಭಟ್ ಮನವಿ ಮಾಡಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಶ್ರೀ ಮಹಾ ಮೃತ್ಯುಂಜಯ ಮಾದೇಶ್ವರ ದೇವಾಲಯದ ಆಡಳಿತ ಮಂಡಳಿ ಸಂಭಾವನೆ ನೀಡಿ ನನ್ನನ್ನು ಅರ್ಚಕನನ್ನಾಗಿ ನೇಮಿಸಿಕೊಂಡಿದೆ. ನಾನು ದೇವಾಲಯದಲ್ಲಿ ಅರ್ಚಕ ವೃತ್ತಿಯನ್ನಷ್ಟೇ ಮಾಡುತ್ತಿದ್ದು, ಆಡಳಿತ ಮಂಡಳಿ ತೆಗೆದುಕೊಳ್ಳುವ ನಿರ್ಧಾರಗಳಿಗೂ ನನಗೂ ಯಾವುದೇ ಸಂಬಂಧವಿಲ್ಲವೆಂದು ಸ್ಪಷ್ಟಪಡಿಸಿದರು. ಭಕ್ತಾದಿಗಳು ಅಪೇಕ್ಷಿಸಿದ ಸೇವೆ, ಪ್ರಾರ್ಥನೆಯನ್ನು ಸಲ್ಲಿಸುವುದರೊಂದಿಗೆ ದೇವರ ಪೂಜಾ ವಿಧಿ ವಿಧಾನಗಳನ್ನು ಉತ್ತಮ ರೀತಿಯಲ್ಲಿ ನಡೆಸಿಕೊಂಡು ಬರುವುದು ಮಾತ್ರ ನನ್ನ ಕಾಯಕವಾಗಿದೆ. ಅರ್ಚಕನಾಗಿ ನನಗೆ ನನ್ನದೇ ಆದ ಗೌರವವಿದೆ, ಕಟ್ಟೆಮಾಡಿನಲ್ಲಿ ನಡೆದ ಮತ್ತು ನಡೆಯುತ್ತಿರುವ ಯಾವುದೇ ಪ್ರಕರಣಗಳಲ್ಲಿ ನನ್ನನ್ನು ಶಾಮೀಲು ಮಾಡಿ ತೇಜೋವಧೆ ಮಾಡಬೇಡಿ ಎಂದು ಕೋರಿದರು. ಪ್ರಶ್ನೆಯೊಂದಕ್ಕೆ ಉತ್ತರಿಸಿದ ವಿಘ್ನೇಶ್ ಭಟ್ ಅಷ್ಟಮಂಗಲ ಪ್ರಶ್ನೆಯ ಮೂಲಕ ಜ್ಯೋತಿಷಿಗಳು ನೀಡಿದ ಸಲಹೆಯಂತೆ ದೇವಾಲಯಕ್ಕೆ ನಾಮಕರಣ ಮಾಡಿರಬಹುದು. ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ, ಇದರಲ್ಲಿ ನನ್ನ ಪಾತ್ರವಿಲ್ಲ. ದೇವಾಲಯ ಜೀರ್ಣೋದ್ಧಾರದ ಸಂದರ್ಭ ನನ್ನನ್ನು ಪ್ರಧಾನ ಅರ್ಚಕನನ್ನಾಗಿ ನೇಮಕ ಮಾಡಲಾಯಿತು ಎಂದು ತಿಳಿಸಿದರು.









