
ಮಡಿಕೇರಿ ಮಾ.18 NEWS DESK : ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘ ಮತ್ತು ನ್ಯಾಯಾಂಗ ಇಲಾಖಾ ನೌಕರರ ಸಂಘ ಸಂಯುಕ್ತ ಆಶ್ರಯದಲ್ಲಿ ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ಮಡಿಕೇರಿ ನ್ಯಾಯಾಲಯದ ಪುರುಷರ ಕಬಡ್ಡಿ, ವಾಲಿಬಾಲ್, ಮಹಿಳೆಯರ ಥ್ರೋಬಾಲ್, ಹಗ್ಗಜಗ್ಗಾಟದಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ಚಾಂಪಿಯನ್ ತಂಡವಾಗಿ ಹೊರಹೊಮ್ಮಿದೆ. ನ್ಯಾಯಾಂಗ ಇಲಾಖಾ ನೌಕರರ ಕ್ರೀಡಾಕೂಟದಲ್ಲಿ ಸಾಧಿಸಿದ ಗೆಲುವಿನ ಹಿನ್ನಲೆ ಮಡಿಕೇರಿಯಲ್ಲಿರುವ ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರು ಗೆಲುವಿನ ಸಂಭ್ರಮಾಚರಣೆ ನಡೆಸಿದರು. ಪಂದ್ಯಾವಳಿಯಲ್ಲಿ ಮಡಿಕೇರಿ, ವಿರಾಜಪೇಟೆ, ಕುಶಾಲನಗರ, ಪೊನ್ನಂಪೇಟೆ ಹಾಗೂ ಸೋಮವಾರಪೇಟೆ ನ್ಯಾಯಾಲಯದ ನೌಕರರು ಅಲ್ಲದೆ ವಕೀಲರು ಮತ್ತು ನ್ಯಾಯಾಧೀಶರು ಕೂಡ ಗುಂಪು ಕ್ರೀಡೆಯಲ್ಲಿ ಭಾಗವಹಿಸಿದ್ದರು. ಕೊಡಗು ಜಿಲ್ಲಾ ನ್ಯಾಯಾಂಗ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಜಯಪ್ಪ ಮಾತನಾಡಿ, ಜಿಲ್ಲೆಯ ವಕೀಲರು, ನ್ಯಾಯಾಧೀಶರು, ನ್ಯಾಯಾಲಯದ ಸಿಬ್ಬಂದಿಗಳಿಗೆ ಕ್ರೀಡಾಕೂಟ ಆಯೋಜಿಸಿದ್ದು, ತುಂಬಾ ಯಶಸ್ವಿಯಾಗಿ ಕ್ರೀಡಾಕೂಟ ನಡೆಸಲಾಗಿದೆ ಎಂದು ಹರ್ಷ ವ್ಯಕ್ತಪಡಿಸಿದರು. ನ್ಯಾಯಾಂಗ ಇಲಾಖೆ ನೌಕರರ ಸಂಘದ ಅಧ್ಯಕ್ಷ ಕೆ.ಕೆ.ಬೋಪಯ್ಯ, ಉಪಾಧ್ಯಕ್ಷರಾದ ಮಂಜುನಾಥ್ ಪೂಜಾರ, ಪ್ರಮುಖರಾದ ಎ.ಜೆ.ಸ್ಟಾನಿ, ಬಸವರಾಜ್ ಘಂಟೀಮಠ್, ಕೆ.ಎ.ಚಂಗಪ್ಪ, ಬಿ.ಕೆ.ರೋಹಿಣಿ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.









