
ಮಡಿಕೇರಿ ಮೇ 2 NEWS DESK : ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆಗೆಂದು ಅಧಿಕಾರಿಗಳು ಮನೆ ಮನೆಗೆ ಬರುವ ಸಂದರ್ಭ ಆದಿ ದ್ರಾವಿಡ ಜನಾಂಗದ ಮಂದಿ ಪರಿಶಿಷ್ಟ ಜಾತಿ “ಆದಿ ದ್ರಾವಿಡ” ಎಂದು ನಮೂದಿಸಬೇಕು. ಅಧಿಕಾರಿಗಳು ಕೂಡ ಇದನ್ನು ಅನುಮೋದಿಸಿ ಪರಿಶಿಷ್ಟ ಜಾತಿ “ಆದಿ ದ್ರಾವಿಡ” ಎಂದು ದಾಖಲಿಸಬೇಕು ಎಂದು ಆದಿ ದ್ರಾವಿಡ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಹೆಚ್.ಎಂ.ಸೋಮಪ್ಪ ಮನವಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ತುಳು ಭಾಷಿಕ ಆದಿ ದ್ರಾವಿಡ ಜಾತಿ ಬಾಂಧವರಿಗೆ 8 ವಿವಿಧ ರೀತಿಯ `ಪರಿಶಿಷ್ಟ ಜಾತಿ’ ಪ್ರಮಾಣ ಪತ್ರವನ್ನು ನೀಡಲಾಗುತ್ತಿದ್ದು, ಇದರಿಂದ ತೊಂದರೆ ಎದುರಾಗಿದೆ. ಆದ್ದರಿಂದ ಪರಿಶಿಷ್ಟ ಜಾತಿ “ಆದಿ ದ್ರಾವಿಡ” ಎಂದು ಜಾತಿ ಪ್ರಮಾಣಪತ್ರ ನೀಡಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ನ್ಯಾಯಮೂರ್ತಿ ಡಾ.ಹೆಚ್.ಎನ್.ನಾಗಮೋಹನ ದಾಸ್ ಅವರ ಏಕಸದಸ್ಯ ವಿಚಾರಣಾ ಆಯೋಗದ ಶಿಫಾರಸ್ಸಿನಂತೆ ಪರಿಶಿಷ್ಟ ಜಾತಿ ಒಳ ಮೀಸಲಾತಿ ವರ್ಗೀಕರಣಕ್ಕೆ ಸಂಬಂಧಪಟ್ಟಂತೆ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆ ನಡೆಯಲಿದೆ. ಸಮಾಜ ಕಲ್ಯಾಣ ಇಲಾಖೆ ಪರಿಶಿಷ್ಟ ಜಾತಿ ಕುಟುಂಬಗಳ ಸಮೀಕ್ಷೆಯನ್ನು ಒಟ್ಟು ಮೂರು ಹಂತಗಳಲ್ಲಿ ನಡೆಸುತ್ತಿದೆ.
ಮೊದಲ ಹಂತÀ ಮೇ 5 ರಿಂದ 17 ರವರೆಗೆ ಮನೆ ಮನೆ ಸಮೀಕ್ಷೆ ನಡೆಸಲಾಗುತ್ತದೆ. ಮೇ 19 ರಿಂದ 21 ರವರೆಗೆ ಮತಗಟ್ಟೆ ಪ್ರದೇಶವಾರು ವಿಶೇಷ ಶಿಬಿರಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗುವುದು. ಮೇ 19 ರಿಂದ 23 ರವರೆಗೆ ಸ್ವಯಂ ಘೋಷಣೆ ಆನ್ ಲೈನ್ ಮೂಲಕ ಸಲ್ಲಿಸಲು ಅವಕಾಶವಿದೆ. ಗಣತಿದಾರರು ಮನೆ-ಮನೆ ಸಮೀಕ್ಷೆಗೆ ಬರುವ ಸಂದರ್ಭ ಪರಿಶಿಷ್ಟ ಜಾತಿ ಸಮುದಾಯದವರು ಮಾಹಿತಿಯನ್ನು ನೀಡಬೇಕು ಎಂದರು.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ವಾಸಿಸುತ್ತಿರುವ ತುಳು ಭಾಷಿಕ ಆದಿ ದ್ರಾವಿಡ ಜಾತಿ ಬಾಂಧವರಿಗೆ ಪರಿಶಿಷ್ಟ ಜಾತಿ “ಆದಿ ದ್ರಾವಿಡ” ಎಂದು ಜಾತಿ ಪ್ರಮಾಣಪತ್ರ ನೀಡಲು ಸರಕಾರÀ ಕ್ರಮ ಕೈಗೊಳ್ಳಬೇಕೆಂದು ಕಳೆದ ಅನೇಕ ವರ್ಷಗಳಿಂದ ಸಂಘಟನೆ ಮೂಲಕ ಒತ್ತಾಯಿಸುತ್ತಾ ಬರಲಾಗುತ್ತಿದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಡಳಿತಕ್ಕೆ ಸರಕಾರ ನಿರ್ದೇಶನ ನೀಡಿದೆ. ಜಿಲ್ಲಾಡಳಿತ ತಾಲ್ಲೂಕು ಕಚೇರಿಗಳಿಗೆ ಆದೇಶ ಮಾಡಿ “ಆದಿ ದ್ರಾವಿಡ” ಎಂದು ಜಾತಿ ಪ್ರಮಾಣಪತ್ರ ನೀಡಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದೆ. ಆದರೆ ಕೊಡಗು ಜಿಲ್ಲೆಯಲ್ಲಿರುವ ತುಳು ಭಾಷಿಕ ಆದಿ ದ್ರಾವಿಡ ಜನಾಂಗ ಬಾಂಧವರಿಗೆ ಇಲ್ಲಿಯವರೆಗೆ ಪರಿಶಿಷ್ಟ ಜಾತಿ “ಆದಿ ದ್ರಾವಿಡ” ಎಂದು ಜಾತಿ ಪ್ರಮಾಣಪತ್ರ ದೊರೆತ್ತಿಲ್ಲ. ಶೇ.5 ಮಂದಿಗೆ ಮಾತ್ರ ಪ್ರಮಾಣಪತ್ರ ದೊರೆತ್ತಿದ್ದು, ಶೇ.95 ಮಂದಿ ಗೊಂದಲದಲ್ಲಿದ್ದಾರೆ ಎಂದು ಹೆಚ್.ಎಂ.ಸೋಮಪ್ಪ ಬೇಸರ ವ್ಯಕ್ತಪಡಿಸಿದರು.
ಕೊಡಗು ಸೇರಿದಂತೆ ಚಿಕ್ಕಮಗಳೂರು, ಹಾಸನ, ಶಿವಮೊಗ್ಗ, ದಕ್ಷಿಣ ಕನ್ನಡ, ಕುಂದಾಪುರ ಸೇರಿದಂತೆ ಇತರ ಜಿಲ್ಲಾ ವ್ಯಾಪ್ತಿಯಲ್ಲಿ ಸಮುದಾಯದ ಸುಮಾರು 9 ಲಕ್ಷ ಜನರಿದ್ದು, `ಆದಿ ದ್ರಾವಿಡ’ ಸಮೂಹ ಜಾತಿ ಪ್ರಮಾಣ ಪತ್ರದ ವಿಚಾರದಲ್ಲಿ ಗೊಂದಲಕ್ಕೆ ಸಿಲುಕಿದೆ. ಏಕರೂಪದ `ಆದಿ ದ್ರಾವಿಡ’ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ನೀಡುವ ಮೂಲಕ ಸಮಸ್ಯೆ ಬಗೆಹರಿಸಲು ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿದರು.
ಸರಕಾರ, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಆದಿ ದ್ರಾವಿಡ ಜನಾಂಗದ ನೋವನ್ನು ಅರಿತುಕೊಳ್ಳುತ್ತಿಲ್ಲ. ಈಗಲೂ 8 ವಿವಿಧ ರೀತಿಯ `ಪರಿಶಿಷ್ಟ ಜಾತಿ’ ಪ್ರಮಾಣ ಪತ್ರವನ್ನು ನೀಡಲಾಗುತ್ತಿದೆ. ತಪ್ಪಾಗಿ ಜಾತಿ ನಮೂದು ಮಾಡುತ್ತಿರುವುದರಿಂದ ಆದಿದ್ರಾವಿಡ ಜನಾಂಗದ ಮಕ್ಕಳಿಗೆ ಶಾಲೆಗಳಲ್ಲಿ ಸರ್ಕಾರದ ಸೌಲಭ್ಯಗಳು ದೊರೆಯುತ್ತಿಲ್ಲ. ವಿವಾಹ ಸಂಬಂಧಗಳಿಗೆ ತುಂಬಾ ತೊಂದರೆಯಾಗುತ್ತಿದೆ ಮತ್ತು ಆದಿದ್ರಾವಿಡ ಸಮುದಾಯ ಸೌಲಭ್ಯದಿಂದ ವಂಚಿತವಾಗುತ್ತಿದೆ ಎಂದು ಆರೋಪಿಸಿದರು. ನೆರೆಯ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆದಿ ದ್ರಾವಿಡ ಸಮೂಹಕ್ಕೆ ಸಮರ್ಪಕವಾಗಿ ಪರಿಶಿಷ್ಟ ಜಾತಿ `ಆದಿ ದ್ರಾವಿಡ’ ಪ್ರಮಾಣ ಪತ್ರ ನೀಡಲಾಗುತ್ತಿದೆ. ಆದರೆ, ದಕ್ಷಿಣ ಕನ್ನಡ ಜಿಲ್ಲೆಯಿಂದ ಕೆಲಸ ಅರಸಿಕೊಂಡು ಕೊಡಗು, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳಿಗೆ ಬಂದು ನೆಲೆಸಿರುವ ಆದಿ ದ್ರಾವಿಡ ಸಮುದಾಯಕ್ಕೆ ತಪ್ಪಾಗಿ ಪ್ರಮಾಣಪತ್ರವನ್ನು ನೀಡಲಾಗುತ್ತಿದೆ. ಸರಕಾರ ಹಾಗೂ ಜನಪ್ರತಿನಿಧಿಗಳು ನೀಡುತ್ತಿರುವ ಭರವಸೆಗಳು ಯಾವುದೂ ಇಲ್ಲಿಯವರೆಗೆ ಈಡೇರಿಲ್ಲ. ಆದ್ದರಿಂದ ಸಮೀಕ್ಷೆಗೆಂದು ಅಧಿಕಾರಿಗಳು ಮನೆ ಮನೆಗೆ ತೆರಳಿ ಪಾರದರ್ಶಕವಾಗಿ ಸಮೀಕ್ಷೆ ನಡೆಸಬೇಕು ಮತ್ತು ಅಧಿಕಾರಿಗಳು ಬರುವ ಸಂದರ್ಭ ಆದಿ ದ್ರಾವಿಡ ಜನಾಂಗದ ಮಂದಿ ಪರಿಶಿಷ್ಟ ಜಾತಿ “ಆದಿ ದ್ರಾವಿಡ” ಎಂದು ನಮೂದಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಪಿ.ಎಲ್.ಸುರೇಶ್, ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಮಧು, ಮಡಿಕೇರಿ ತಾಲ್ಲೂಕು ಅಧ್ಯಕ್ಷ ಹೆಚ್.ಎಂ.ನಂದಕುಮಾರ್ ಮಕ್ಕಂದೂರು, ವಿರಾಜಪೇಟೆ ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎ.ಲಲಿತ ಹಾಗೂ ಮಾದಾಪುರ ಘಟಕದ ಸದಸ್ಯ ರವಿ ಮಕ್ಕಂದೂರು ಉಪಸ್ಥಿತರಿದ್ದರು.









