


ಮಡಿಕೇರಿ ಮೇ 13 NEWS DESK : ಪೆಮ್ಮಂಡ ಒಕ್ಕದ ವತಿಯಿಂದ ಜೂ.7 ಮತ್ತು 8 ರಂದು ಪೊನ್ನಂಪೇಟೆಯಲ್ಲಿ ಪ್ರಥಮ ವರ್ಷದ ಕೊಡವ ಕುಟುಂಬಗಳ ನಡುವೆ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ “ತೋಕ್ ನಮ್ಮೆ” ಆಯೋಜಿಸಿದೆ ಎಂದು ಕುಟುಂಬದ ಹಿರಿಯರಾದ ಪಿ.ಕೆ.ಪೊನ್ನಪ್ಪ ತಿಳಿಸಿದರು. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕೊಡವ ಕುಟುಂಬಗಳಲ್ಲಿರುವ ಯುವಕ ಯುವತಿಯರಿಗೆ ಶೂಟಿಂಗ್‍ನಲ್ಲಿರುವ ಪ್ರತಿಭೆಯನ್ನು ಹೊರ ಹಾಕಲು ವೇದಿಕೆ ಕಲ್ಪಿಸುವ ನಿಟ್ಟಿನಲ್ಲಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಪೊನ್ನಂಪೇಟೆಯ ಜ್ಯೂನಿಯರ್ ಕಾಲೇಜು ಮೈದಾನದಲ್ಲಿ 12 ಬೋರ್ ಮತ್ತು .22 ವಿಭಾಗದಲ್ಲಿ ಸ್ಪರ್ಧೆ ನಡೆಯಲಿದ್ದು, ಒಂದು ಕುಟುಂಬದಿಂದ ನಾಲ್ಕು ತಂಡಗಳಿಗೆ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಒಂದು ತಂಡದಲ್ಲಿ ಇಬ್ಬರಂತೆ ಒಟ್ಟು 8 ಮಂದಿಗೆ ಅವಕಾಶ ಇರುತ್ತದೆ ಎಂದರು. ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನ ಪಡೆದ ತಂಡಕ್ಕೆ ರೂ.50 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ರೂ.40 ಸಾವಿರ ಹಾಗೂ ಆಕರ್ಷಕ ಟ್ರೋಫಿ, ತೃತೀಯ ಸ್ಥಾನ ಪಡೆದ ತಂಡಕ್ಕೆ ರೂ.30 ಸಾವಿರ ಹಾಗೂ ಆಕರ್ಷಕ ಟ್ರೋಫಿ ನೀಡಲಾಗವುದೆಂದರು. ಆಸಕ್ತ ತಂಡಗಳು ಪ್ರವೇಶ ಶುಲ್ಕ ರೂ.1,000 ಪಾವತಿಸಿ, ಜೂನ್ 3ರ ಒಳಗಾಗಿ ತಂಡದ ಹೆಸರನ್ನು ನೋಂದಾಯಿಸಿಕೊಳ್ಳುವಂತೆ ಪೊನ್ನಪ್ಪ ತಿಳಿಸಿದರು. ಹೆಚ್ಚಿನ ಮಾಹಿತಿಗಾಗಿ ಕರಣ್ ಪೊನ್ನಪ್ಪ 7349714649, ಬೆಲ್ಲು ಬಿದ್ದಪ್ಪ 9686962199 ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಕುಟುಂಬದ ಹಿರಿಯರಾದ ರಾಜಾ ಕುಶಾಲಪ್ಪ, ಕಾರ್ಯದರ್ಶಿ ಕಾಶಿ, ಕ್ರೀಡಾ ಅಧ್ಯಕ್ಷ ಮಂಜು ಬೋಪಣ್ಣ, ಕಾರ್ಯದರ್ಶಿ ಬೆಲ್ಲು ಬಿದ್ದಪ್ಪ, ಖಜಾಂಚಿ ಗಿಣಿ ನಾಚಪ್ಪ ಉಪಸ್ಥಿತರಿದ್ದರು.









