




ಮಡಿಕೇರಿ ಮೇ 30 NEWS DESK : ಬಡ ರೋಗಿಗಳ ಅನುಕೂಲಕ್ಕಾಗಿ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಪ್ರಸ್ತಾಪವನ್ನು ರಾಜ್ಯ ಸರ್ಕಾರ ಕೈಬಿಡಬೇಕೆಂದು ಒತ್ತಾಯಿಸಿ ಕೊಡಗು ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಸೋಮವಾರಪೇಟೆ ಬಿಜೆಪಿ ಮಂಡಲ ಪ್ರತಿಭಟನೆ ನಡೆಸಿತು. ಸೋಮವಾರಪೇಟೆ ಸರ್ಕಾರಿ ಆಸ್ಪತ್ರೆ ಎದುರು ಜಮಾಯಿಸಿದ ಬಿಜೆಪಿ ಪ್ರಮುಖರು ಹಾಗೂ ಕಾರ್ಯಕರ್ತರು ಮೌನ ಪ್ರತಿಭಟನೆಯ ಮೂಲಕ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಬಡವರ ಹಾಗೂ ಮಧ್ಯಮ ವರ್ಗದ ರೋಗಿಗಳ ಆರೋಗ್ಯವನ್ನು ಕಾಪಾಡಬೇಕು ಎನ್ನುವ ಉದ್ದೇಶದಿಂದ ಕಡಿಮೆ ಬೆಲೆಯ ಔಷಧಿಗಳ ಮಾರಾಟಕ್ಕಾಗಿ ಕ್ರಮ ಕೈಗೊಂಡಿದ್ದಾರೆ. ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲೇ ಜನೌಷಧಿ ಕೇಂದ್ರಗಳನ್ನು ಸ್ಥಾಪಿಸಿದ್ದಾರೆ. ಕೇಂದ್ರ ಸರ್ಕಾರದ ಬಡವರ ಪರವಾದ ಕಾಳಜಿಯನ್ನು ಸಹಿಸದ ರಾಜ್ಯ ಕಾಂಗ್ರೆಸ್ ಸರ್ಕಾರ ಜನೌಷಧಿ ಕೇಂದ್ರಗಳನ್ನು ಮುಚ್ಚುವ ಪ್ರಸ್ತಾಪ ಮಾಡಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಯಾವುದೇ ಕಾರಣಕ್ಕೂ ಜನೌಷಧಿ ಕೇಂದ್ರಗಳನ್ನು ಮುಚ್ಚಲು ಬಿಡುವುದಿಲ್ಲ, ಒಂದು ವೇಳೆ ಮುಚ್ಚಲು ಮುಂದಾದರೆ ರಾಜ್ಯವ್ಯಾಪಿ ಹೋರಾಟವನ್ನು ತೀವ್ರಗೊಳಿಸುವುದಾಗಿ ಪ್ರಮುಖರು ಎಚ್ಚರಿಕೆ ನೀಡಿದರು. ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ ಪ್ರತಿಭಟನಾಕಾರರು ನಂತರ ಮೆರವಣಿಗೆ ಮೂಲಕ ತಹಶೀಲ್ದಾರ್ ಕಚೇರಿಗೆ ತೆರಳಿ ಸರ್ಕಾರಕ್ಕೆ ಮನವಿ ನೀಡಿದರು. ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ, ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಸೋಮವಾರಪೇಟೆ ಮಂಡಲ ಅಧ್ಯಕ್ಷ ಗೌತಮ್ ಗೌಡ, ಪ್ರಧಾನ ಕಾರ್ಯದರ್ಶಿ ಶರತ್, ಮಡಿಕೇರಿ ಮಂಡಲ ಅಧ್ಯಕ್ಷ ಉಮೇಶ್ ಸುಬ್ರಮಣಿ, ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಮಹೇಶ್ ತಿಮ್ಮಯ್ಯ, ಜಿಲ್ಲಾ ಉಪಾಧ್ಯಕ್ಷರು ಹುಲ್ಲೂರಿಕೊಪ್ಪದ ಮಾದಪ್ಪ, ಪ್ರಮುಖರಾದ ಆರ್.ಕೆ.ಚಂದ್ರು, ತಿಮ್ಮಯ್ಯ, ದರ್ಶನ್, ಜಗದೀಶ್ ಬಿ.ಕೆ, ಕವನ್ ಕಾವೇರಪ್ಪ, ಸೋಮೇಶ್, ಜಿ.ಪಂ ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್ ಮತ್ತಿತರ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.









