
ವಿರಾಜಪೇಟೆ ಮೇ 30 NEWS DESK : ಕನ್ನಡದ ಪ್ರಖ್ಯಾತ ಕವಿ ಹೆಚ್.ಎಸ್.ವೆಂಕಟೇಶಮೂರ್ತಿ ನಿಧನರಾಗಿರುವುದು ಕನ್ನಡ ಸಾಹಿತ್ಯ ಲೋಕಕ್ಕೆ ಇದು ತುಂಬಲಾರದ ನಷ್ಟವಾಗಿದೆ ಎಂದು ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಸಂತಾಪ ವ್ಯಕ್ತಪಡಿಸಿದೆ. ಪತ್ರಿಕಾ ಪ್ರಕಟಣೆ ನೀಡಿರುವ ವಿರಾಜಪೇಟೆ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ರಾಜೇಶ್ ಪದ್ಮನಾಭ, ಕನ್ನಡಕ್ಕೆ ಅನೇಕ ಕವಿತೆಗಳನ್ನು, ನಾಟಕಗಳನ್ನು, ಸಾಹಿತ್ಯಗಳನ್ನು ಕೊಡುಗೆ ನೀಡಿದ್ದಾರೆ. ಹೆಚ್‍ಎಸ್‍ವಿಯೆಂದೇ ಇವರು ಚಿರಪರಿಚಿತರಾಗಿದ್ದಾರೆ. ಸುಮಾರು 30 ವರ್ಷಗಳ ಕಾಲ ಬೆಂಗಳೂರಿನ ಸೇಂಟ್ ಜೋಸೆಫ್ ವಾಣಿಜ್ಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದರು. 85ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಅವರು ಸಾಹಿತ್ಯಕ್ಕೆ ನೀಡಿದ ಕೊಡುಗೆ ಅನನ್ಯ. ಅವರ ಅಗಲಿಕೆ ಕನ್ನಡ ಸಾಹಿತ್ಯ ಲೋಕಕ್ಕೆ ಅಪಾರ ನೋವನ್ನುಂಟುಮಾಡಿದೆ ಎಂದು ರಾಜೇಶ್ ತಿಳಿಸಿದರು.









