
ಮಡಿಕೇರಿ ಜೂ.7 NEWS DESK : ತ್ಯಾಗ ಮತ್ತು ಬಲಿದಾನದ ಸಂಕೇತವಾದ ಬಕ್ರೀದ್ ಹಬ್ಬವನ್ನು ಕೊಡಗಿನಲ್ಲಿ ಮುಸ್ಲಿಂ ಬಾಂಧವರು ಸಂಭ್ರಮದಿಂದ ಆಚರಿಸಿದರು. ವಿಶ್ವದಲ್ಲಿ ಶಾಂತಿ, ಸೌಹಾರ್ದತೆ ನೆಲಸಲಿ ಎಂದು ಸಮುದಾಯ ಬಾಂಧವರು ವಿಶೇಷ ಪ್ರಾರ್ಥನೆ ಸಲ್ಲಿಸಿದರು. ನಂತರ ಪರಸ್ಪರ ಸಿಹಿ ಹಂಚಿ ಶುಭಹಾರೈಸಿದರು. ಮಡಿಕೇರಿಯ ಸಿ.ಪಿ.ಸಿ ಲೇಔಟ್‍ನ ಮಸ್ಜಿದ್ ಉರ್ ರ್ರಹ್ಮಾ ಮಸೀದಿಯಲ್ಲಿ ತ್ಯಾಗ ಬಲಿದಾನ ಸಂಕೇತವಾದ ಬಕ್ರೀದ್ ಹಬ್ಬವನ್ನು ಶ್ರದ್ಧಾಭಕ್ತಿಯಯಿಂದ ಆಚರಿಸಲಾಯಿತು. ಮುಂಜಾನೆ ಮಸೀದಿಯಲ್ಲಿ ಮುಸಲ್ಮಾನ ಬಾಂಧವರು ಜಮಾಜ್ ಸಲ್ಲಿಸಿ, ಮಸ್ಜಿದ್ ಉರ್ ರ್ರಹ್ಮಾ ಮಸೀದಿಯ ಧರ್ಮಗುರು ಉಮ್ಮರ್ ಮೌಲವಿ, ಅವರ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ನಂತರ ಮಾತನಾಡಿದ ಧರ್ಮಗುರು ಉಮ್ಮರ್ ಮೌಲವಿ, ತ್ಯಾಗ ಬಲಿದಾನ, ಮತ್ತು ಸಹನೆಯ ಪ್ರತೀಕರಾಗಿದ್ದ ಪ್ರವಾದಿ ಇಬ್ರಾಹಿಮರ ಚರಿತ್ರೆ ಮಾನವ ಕುಲಕ್ಕೆ ಮಾದರಿ. ಏಕ ದೇವತ್ವದ ಪ್ರತಿಪಾದಕರಾಗಿದ್ದ ಪ್ರವಾದಿ ಇಬ್ರಾಹಿಮರು ತಮ್ಮ ಜೀವನದುದ್ದಕ್ಕೂ ದೇವನ ಸಂಪ್ರೀತಿಗಾಗಿ ಬದುಕಿದ ಸಂತರು ಎಂದರು. ವಿಶ್ವಾಸಿಗಳು ಎಂದಿಗೂ ಕೋಮುವಾದಿಗಳಾಗಲು ಸಾಧ್ಯವಿಲ್ಲ. ಮಾನವೀಯ ಮೌಲ್ಯಗಳನ್ನು ಕಾಯ್ದುಕೊಳ್ಳುವವರಾಗಿದ್ದಾರೆ. ಪ್ರೀತಿ, ಕಾರುಣೆ, ಚಿಂತನೆ, ಸೇವಾ ಗುಣಗಳನ್ನು ತೋರುವವರಾಗಿದ್ದಾರೆ ಎಂದರು. ಇಂದು ಸಮಾಜದಲ್ಲಿ ಮಾದಕ ದ್ರವ್ಯಗಳ ವ್ಯಸನದ ದಾಸರಾಗಿರುವ ಯುವಕರನ್ನು ಇದರಿಂದ ವಿಮುಕ್ತಗೊಳಿಸಲು ನಾವು ಪ್ರಯತ್ನ ಮಾಡಬೇಕು, ಭಯೋತ್ಪಾದನೆ ಇಲ್ಲದಂತೆ ಮಾಡಬೇಕು, ಕೋಮುವಾದವನ್ನು ಬಿಟ್ಟು ಪರಸ್ಪರ ಎಲ್ಲರೂ ಪ್ರೀತಿ ವಿಶ್ವಾಸದಿಂದ ಇರಬೇಕು ಎಂದು ಕರೆ ನೀಡಿದರು. ನಂತರ ವಿಶೇಷ ಸಿಹಿ ಖಾದ್ಯಗಳನ್ನು ನೀಡಿ ಪರಸ್ಪರ ಶುಭ ಹಾರೈಸಿದರು. ನಗರದ ಜಾಮೀಯಾ ಮಸೀದಿ ಇಮಾಮ್ ನಸೀಮ್ ಅಕ್ತರ್ ರಝಾ, ಗಣಪತಿ ಬೀದಿಯಲ್ಲಿರುವ ಬದ್ರಿಯಾ ಮಸೀದಿ ನೌಶಾದ್ ಸಖಾಪಿ ಹಾಗೂ ಮಲಬಾರ್ ಮಸೀದಿ ಹಮೀದ್ ಮದನಿ, ಮಹದೇವ ಪೇಟೆಯ ಭಟ್ಕಲ್
ಮಸೀದಿ ಅಲೀ ಮುಸ್ಲಿಯರ್, ಮಕ್ಕ ಮಸೀದಿ , ಮೌಲಾನ ಹಕೀಮ್, ಮದೀನ ಮಸೀದಿ ಅಬ್ದುಲ್ ಖಯ್ಯೂಮ್ ಹಾಗೂ ಲಾಷ್ಕರ ಮಸೀದಿಯಲ್ಲಿ ಮೌಲಾನ ಸಲ್ಮಾನ್ ಅಹಮದ್ ನೇತೃದಲ್ಲಿ ನಮಾಝ್ ನೆರವೇರಿತು.









