
ಮಡಿಕೇರಿ ಜೂ.10 NEWS DESK : ದಿ ಕೂರ್ಗ್ ಡಿಸ್ಟ್ರಿಕ್ಟ್ ಮುಸ್ಲಿಂ ಅಸೋಸಿಯೇಷನ್ ನ ಸದಸ್ಯರ ಸಂಖ್ಯೆಯನ್ನು ಹೆಚ್ಚಿಸಿ ಸಂಘಟನೆಯನ್ನು ಸದೃಢಗೊಳಿಸಲಾಗುವುದು ಮತ್ತು ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ಅಸೋಸಿಯೇಷನ್ ನ ಉಪಾಧ್ಯಕ್ಷ ಎರ್ಮು ಹಾಜಿ ತಿಳಿಸಿದ್ದಾರೆ. ನಗರದ ಕೂರ್ಗ್ ಕಮ್ಯೂನಿಟಿ ಹಾಲ್ ನಲ್ಲಿ ನಡೆದ ಅಸೋಸಿಯೇಷನ್ ನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಸಂಘದ ಅಭಿವೃದ್ಧಿಗೆ ಸದಸ್ಯರ ಸಂಖ್ಯೆ ಹೆಚ್ಚಾಗಬೇಕಾಗಿದೆ, ಸಮುದಾಯದ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರೊಂದಿಗೆ ಚರ್ಚಿಸಿ ಸದಸ್ಯತ್ವವನ್ನು ಹೆಚ್ಚಿಸುವ ಕುರಿತು ಸಿದ್ದಾಪುರದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಗಿದೆ. ಮುಂದುವರಿದ ಭಾಗವಾಗಿ ಇಂದು ಪ್ರಮುಖರನ್ನು ಒಗ್ಗೂಡಿಸಿ ಸಭೆ ನಡೆಸಲಾಗಿದೆ. ಸಂಘದ ಸದಸ್ಯತ್ವ ಶುಲ್ಕ ರೂ.2,500 ಎಂದು ನಿಗಧಿಪಡಿಸಲಾಗಿದೆ. ಜಮಾಅತ್, ಮಸೀದಿಗೆ ಸಂಬಂಧಿಸಿದ ಸಂಘಟನೆಗಳ ಸದಸ್ಯರು ಸದಸ್ಯತ್ವ ಪಡೆದುಕೊಳ್ಳಬಹುದಾಗಿದೆ ಎಂದರು. ಸಮಾಜವನ್ನು ಸಾಮಾಜಿಕ ಪಿಡುಗುಗಳು ಕಾಡುತ್ತಿವೆ, ಯುವ ಸಮೂಹ ಮಾದಕ ವ್ಯಸನಿಗಳಾಗುತ್ತಿದ್ದಾರೆ. ಸಮುದಾಯದ ಯುವಕರನ್ನು ಮಾದಕ ವಸ್ತುಗಳ ಸೇವನೆಯಿಂದ ಮುಕ್ತರನ್ನಾಗಿಸುವುದು, ಅವರ ಕುಟುಂಬದವರನ್ನು ರಕ್ಷಿಸುವುದು, ಸಮುದಾಯದ ಕ್ರಿಕೆಟ್ ಪಂದ್ಯಗಳನ್ನು ವರ್ಷಂಪ್ರತಿ ನಡೆಸಲು ಪ್ರೋತ್ಸಾಹ ನೀಡುವುದು, ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಪಡೆಯಲು ಕ್ರಮ ಕೈಗೊಳ್ಳುವುದು, ಸಮಾಜದಲ್ಲಿ ಯುವಕರನ್ನು ಗುರುತಿಸುವಂತೆ ಮಾಡಲು ವಿಶೇಷ ಆಸಕ್ತಿ ವಹಿಸುವುದು ಮತ್ತು ಧಾರ್ಮಿಕ ಶಿಕ್ಷಣದ ಬಗ್ಗೆ ಚರ್ಚಿಸಲಾಗುವುದು. ನಿಷ್ಕ್ರಿಯವಾಗಿರುವ ಸಂಘ-ಸಂಸ್ಥೆಗಳಿಗೆ ಪುನಶ್ಚೇತನ ನೀಡಲಾಗುವುದು, ಚುನಾವಣೆ ಸಂದರ್ಭ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಅರಿವು ಮೂಡಿಸಲಾಗುವುದು. ಯುವಕರು ಕೆಲಸಗಳಲ್ಲಿ ಸ್ವಯಂ ಪ್ರೇರಿತರಾಗಿ ತೊಡಗಿಸಿಕೊಳ್ಳುವಂತೆ ಅಸೋಸಿಯೇಷನ್ ಮೂಲಕ ಪ್ರೇರೆಪಿಸಲಾಗುವುದು ಎಂದು ವಿವರಿಸಿದರು. ಸಮಾಜದ ಪ್ರಮುಖ ಕೆ.ಎ.ಯಾಕುಬ್ ಅವರು ಮಾತನಾಡಿ, 1971ರಲ್ಲಿ ಅಸೋಸಿಯೇಷನ್ ಸ್ಥಾಪನೆಗೊಂಡಿದ್ದು, ಕೊಡಗಿನಲ್ಲಿರುವ ಜಮಾಅತ್, ಮಸೀದಿಗೆ ಸಂಬಂಧಿಸಿದ ಸಂಘಟನೆಗಳ ಗಮನ ಸೆಳೆಯಲು ಮತ್ತು ಅಸೋಸಿಯೇಷನ ಅಭಿವೃದ್ಧಿಗೆ ಸದಸ್ಯತ್ವವನ್ನು ಹೆಚ್ಚಿಸಲು ಸಭೆ ನಡೆಸಲಾಗಿದೆ ಎಂದರು.
ಸಭೆಯಲ್ಲಿ ವಿವಿಧ ಸಂಘಟನೆಗಳ ಪ್ರಮುಖರಾದ ಹೆಚ್.ಎ.ಹಂಸ, ಅನ್ಸರ್, ಇಸ್ಮಾಯಿಲ್, ಆದಮ್, ಸಿ.ಕೆ.ಮಹಮ್ಮದ್ ಹಾಜಿ, ಹ್ಯಾರಿಸ್ ಸೇರಿದಂತೆ ಜಮಾಅತ್‍ನ ಪ್ರಮುಖರು ಉಪಸ್ಥಿತರಿದ್ದರು.










