
ಮಡಿಕೇರಿ ಜೂ.14 NEWS DESK : ಅಖಿಲ ಭಾರತೀಯ ಸೈನಿಕ ಶಾಲೆಗಳ ಗುಂಪು-ಹೆಚ್ ವಿಭಾಗದ ಹಾಕಿ ಪಂದ್ಯಾವಳಿಯಲ್ಲಿ ಕೊಡಗು ಸೈನಿಕ ಶಾಲೆಯ ತಂಡ ಉತ್ತಮ ಪ್ರದರ್ಶನ ನೀಡಿ ಎರಡನೇ ಸ್ಥಾನವನ್ನು ತನ್ನದಾಗಿಸಿಕೊಂಡಿದೆ. ಸೈನಿಕ ಶಾಲೆ ಕೊಡಗಿನ ಆತಿಥ್ಯದಲ್ಲಿ ಕೂಡಿಗೆ ಕ್ರೀಡಾಶಾಲೆಯ ಅಸ್ಟ್ರೋ ಟರ್ಫ್ ಹಾಕಿ ಮೈದಾನದಲ್ಲಿ ನಡೆದ ಅಖಿಲ ಭಾರತೀಯ ಸೈನಿಕ ಶಾಲೆಗಳ ಗುಂಪು- ಹೆಚ್ ವಿಭಾಗದ ಹಾಕಿ ಪಂದ್ಯಾವಳಿ- 2025 ಪಂದ್ಯಾವಳಿ ನಡೆಯಿತು. ಪಂದ್ಯಾವಳಿಯಲ್ಲಿ ಜೂನಿಯರ್ ವಿಭಾಗದಿಂದ ಸೈನಿಕ ಶಾಲೆ ಕಝಕೂಟಂ, ಸಬ್ ಜೂನಿಯರ್ ವಿಭಾಗದಿಂದ ಸೈನಿಕ ಶಾಲೆ ಅಮರಾವತಿನಗರ ಹಾಗೂ ಬಾಲಕಿಯರ ಜೂನಿಯರ್ ವಿಭಾಗದಿಂದ ಸೈನಿಕ ಶಾಲೆ ಕಲಿಕಿರಿ ಪ್ರಥಮ ಸ್ಥಾನ ಪಡೆದುಕೊಂಡಿತು. ಜೂ.9 ರಿಂದ ಐದು ದಿನಗಳ ಕಾಲ ನಡೆದ ಪಂದ್ಯಾವಳಿಯಲ್ಲಿ ಕೇರಳದ ಸೈನಿಕ ಶಾಲೆ ಕಝಕೂಟಂ, ಆಂಧ್ರಪ್ರದೇಶದ ಸೈನಿಕ ಶಾಲೆ ಕಲಿಕಿರಿ, ತಮಿಳುನಾಡಿನ ಸೈನಿಕ ಶಾಲೆ ಅಮರಾವತಿನಗರ ಮತ್ತು ಅತೀಥೆಯ ತಂಡವಾದ ಸೈನಿಕ ಶಾಲೆ ಕೊಡಗು ಭಾಗವಹಿಸಿದ್ದವು. ಇದರೊಂದಿಗೆ ಪಂದ್ಯಾವಳಿಯಲ್ಲಿ ಪ್ರತಿ ಶಾಲೆಯಿಂದ ಬಾಲಕರ ಜೂನಿಯರ್, ಬಾಲಕರ ಸಬ್ ಜೂನಿಯರ್ ಹಾಗೂ ಬಾಲಕಿಯರ ಜೂನಿಯರ್ ಎಂಬ ಮೂರು ವಿಭಾಗದ ತಂಡಗಳಿದ್ದವು. ಪಂದ್ಯಾವಳಿಯನ್ನು ಶಾಲೆಯ ಪ್ರಭಾರೆ ಪ್ರಾಂಶುಪಾಲರಾದ ಸ್ಕ್ವಾಡ್ರನ್ ಲೀಡರ್ ಮೊಹಮ್ಮದ್ ಶಾಜಿ ಉದ್ಘಾಟಿಸಿ, ಮಾತನಾಡಿ ಕ್ರೀಡಾಪಟುಗಳು ಕ್ರೀಡಾಸ್ಪೂರ್ತಿ ಹಾಗೂ ಸಂಘಿಕ ಹೋರಾಟ ನಡೆಸಬೇಕು. ಉತ್ತಮ ಮನಸ್ಥಿತಿಯನ್ನು ಹೊಂದಿರಬೇಕು ಎಂದು ಹೇಳಿದರು. ಸ್ಪರ್ಧೆಗಳಲ್ಲಿ ಸ್ನೇಹಪೂರ್ವಕವಾದ ಹಾಗೂ ನ್ಯಾಯಯುತವಾದ ಆಟದ ಮೌಲ್ಯಗಳನ್ನು ಪಾಲಿಸಲು ಕರೆ ನೀಡಿದರು. ಭಾಗವಹಿಸಿದ ಸ್ಪರ್ಧಾಳುಗಳು ತೋರಿದ ಶಿಸ್ತು, ಕ್ರೀಡಾಸ್ಫೂರ್ತಿ ಮತ್ತು ಉತ್ಸಾಹವನ್ನು ಪ್ರಶಂಸಿಸಿದರು. ಅಲ್ಲದೇ 2025ನೇ ಸಾಲಿನ ಅಖಿಲ ಭಾರತ ಸೈನಿಕ ಶಾಲೆಗಳ ಪುಟ್ಬಾಲ್ ಕ್ರೀಡಾಕೂಟ ಪ್ರಾರಂಭವಾಗಿರುವುದಾಗಿ ತಿಳಿಸಿದರು. ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಪಾರಿತೋಷಕ, ಪದಕ ಹಾಗೂ ಪ್ರಮಾಣ ಪತ್ರಗಳನ್ನು ವಿತರಿಸಿ ಮಾತನಾಡಿದ ಶಾಲೆಯ ಪ್ರಭಾರೆ ಪ್ರಾಂಶುಪಾಲೆ ವಿಂಗ್ ಕಮಾಂಡರ್ ಪಿ.ಪ್ರಕಾಶ್ ರಾವ್ ಕ್ರೀಡಾಪಟುಗಳು ಆತ್ಮವಿಶ್ವಾಸ, ಕ್ರೀಡಾ ಮನೋಭಾವನೆ ಹೊಂದಬೇಕು ಎಂದರು. ಅತ್ಯುತ್ತಮ ಆಟಗಾರರು ಮತ್ತು ಗೋಲ್ಕೀಪರ್‍ಗಳ ಅದ್ಭುತ ಪ್ರದರ್ಶನವನ್ನು ಪ್ರಶಂಸಿಸಿದರು. ಅಲ್ಲದೆ ಕಾರ್ಯಕ್ರಮದ ಯಶಸ್ವಿಗೆ ಸಹಕಾರ ನೀಡಿದ ಕ್ರೀಡಾ ಶಾಲೆ ಹಾಗೂ ರಾಜ್ಯ ಸರ್ಕಾರದಕ್ಕೆ ಕೃತಜ್ಞತೆ ಸಲ್ಲಿಸಿದರು. ಕಾರ್ಯಕ್ರಮದಲ್ಲಿ ಶಾಲೆಯ ಬೋಧಕ-ಬೋಧಕೇತರ ಸಿಬ್ಬಂದಿ, ಭಾಗವಹಿಸಿದ ಸೈನಿಕ ಶಾಲೆಗಳ ಮೇಲ್ವಿಚಾರಕರು, ಶಾಲೆಯ ಎನ್ ಸಿ ಸಿ ಸಿಬ್ಬಂದಿ ವರ್ಗ, ದೈಹಿಕ ಶಿಕ್ಷಕರು ಹಾಗೂ ಶಾಲೆಯ ಎಲ್ಲಾ ವಿದ್ಯಾರ್ಥಿಗಳು ಹಾಜರಿದ್ದರು. ಭಾಗವಹಿಸಿದ ತಂಡಗಳು ಪಥಸಂಚಲನ ನಡೆಸಿ, ಪ್ರತಿಜ್ಞಾವಿಧಿ ಸ್ವೀಕರಿಸಿದರು.











