
ಮಡಿಕೇರಿ ಜೂ.26 NEWS DESK : ಕಾಡಾನೆಯೊಂದು ಅಸಹಜ ರೀತಿಯಲ್ಲಿ ಸಾವನ್ನಪ್ಪಿರುವ ಘಟನೆ ಸುಂಟಿಕೊಪ್ಪ ಸಮೀಪದ ಕಂಬಿಬಾಣೆ ಊರುಗುಪ್ಪೆ ಪೈಸಾರಿಯಲ್ಲಿ ನಡೆದಿದೆ. ಸುಮಾರು 18 ವರ್ಷದ ಹೆಣ್ಣಾನೆಯ ಕಳೇಬರ ತೋಟವೊಂದರಲ್ಲಿ ಪತ್ತೆಯಾಗಿದೆ. ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದು, ಕಾಡಾನೆಗಳ ನಡುವಿನ ಕಾದಾಟದಲ್ಲಿ ಹೆಣ್ಣಾನೆ ಸಾವನ್ನಪ್ಪಿರಬಹುದು ಎಂದು ಶಂಕಿಸಲಾಗಿದೆ. ಘಟನೆ ನಡೆದು ಒಂದು ದಿನ ಕಳೆದಿದೆ ಎಂದು ಹೇಳಲಾಗಿದೆ. ಮಡಿಕೇರಿ ಡಿಸಿಎಫ್ ಹರ್ಷವರ್ಧನ, ಕುಶಾಲನಗರ ಎಸಿಎಫ್ ಗೋಪಾಲ್, ಆರ್.ಎಫ್.ಒ ರತನ್ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿದರು. ಹೆಣ್ಣಾನೆಯ ಮರಣೋತ್ತರ ಪರೀಕ್ಷೆಯ ವರದಿ ಬಂದ ನಂತರ ಸಾವಿಗೆ ನಿಖರ ಕಾರಣ ತಿಳಿದು ಬರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.









