
ನಾಪೋಕ್ಲು ಜು.28 NEWS DESK : ನೆಲಜಿ ಗ್ರಾಮದ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸಿ ಅಪಾರ ಕೃಷಿ ಗಿಡಗಳನ್ನು ದ್ವಂಸ ಮಾಡಿ ನಷ್ಟ ಉಂಟು ಮಾಡಿರುವ ಘಟನೆ ಜರುಗಿದೆ. ಗ್ರಾಮಗಳಲ್ಲಿ ಕಾಡಾನೆಗಳ ಹಿಂಡು ದಾಂಧಲೆ ನಡೆಸಿದ್ದು, ತೆಂಗು, ಅಡಿಕೆ, ಕಾಫಿ ಗಿಡಗಳನ್ನು ನಾಶಪಡಿಸಿವೆ. ನೆಲಜಿ ಗ್ರಾಮದ ಕೋಟೆರ ಸತೀಶ್ ಮತ್ತು ಸಹೋದರ ಪ್ರಸಾದ್ ಜೋಯಪ್ಪ, ಫಾರ್ಮರ್ಸ್ ಕ್ಲಬ್, ಕೋಟೆರ ಐನ್ ಮನೆ ಹಾಗೂ ಸುತ್ತಮುತ್ತಲಿನ ತೋಟದಲ್ಲಿನ ಕೃಷಿ ಗಿಡಗಳನ್ನು ನಾಶಪಡಿಸಿವೆ. ಅಲ್ಲದೆ ಕಕ್ಕಬ್ಬೆ, ಕುಂಜಿಲ, ಯವಕಪಾಡಿಯ ತೋಟಗಳಲ್ಲಿ ಕಾಡಾನೆಗಳು ದಾಂಧಲೆ ನಡೆಸಿದ್ದು, ಅಪಾರ ಪ್ರಮಾಣದಲ್ಲಿ ಕಾಫಿ, ಬಾಳೆ, ಅಡಿಕೆ ಗಿಡಗಳನ್ನು ಧ್ವಂಸಮಾಡಿದ್ದವು. ಕಾಡಾನೆಗಳನ್ನು ಒಂದು ಭಾಗದಿಂದ ಓಡಿಸಿದರೆ ಮತ್ತೊಂದು ಭಾಗದಿಂದ ನುಸುಳುತ್ತವೆ. ಗ್ರಾಮದ ಜನರು ಸಂಕಷ್ಟ ಅನುಭವಿಸುತ್ತಿದ್ದಾರೆ. ಸಂಬಂಧಪಟ್ಟ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಬೇಕು. ನಷ್ಟ ಸಂಭವಿಸಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಿ ಕೊಡಬೇಕೆಂದು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.









