
ಮಡಿಕೇರಿ ಜು.28 NEWS DESK : ಬೆಂಗಳೂರಿನ ಕ್‌ಗ್ಗಟ್‌ನಾಡ್ ಕೊಡವ ಸಂಘದ 5ನೇ ವರ್ಷದ ಒತ್ತೋರ್ಮೆ ಕೂಟವು ಸಂಭ್ರಮದಿಂದ ನಡೆಯಿತು. ಬೆಂಗಳೂರು ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚಕವಿ ಸಭಾಭವನದಲ್ಲಿ ನಡೆದ ಕಾರ್ಯಕ್ರಮವನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಕೊಡಗಿನ ಹಾಗೂ ಕೊಡವರ ಸಂಸ್ಕೃತಿಯನ್ನು ಉಳಿಸಿ, ಬೆಳೆಸಿ, ನಾಡಿನದ್ಯಂತ ಪಸರಿಸಲು ಇಂತಹ ಸಮ್ಮಿಲನ ಕಾರ್ಯಕ್ರಮವು ಪ್ರಮುಖ ಪಾತ್ರ ವಹಿಸುತ್ತದೆ. ಇಂದಿನ ಯುವ ಪೀಳಿಗೆಯ ಮೇಲೆ ನಮ್ಮ ಸಂಸ್ಕೃತಿ ಪರಂಪರೆ ಹಾಗೂ ಆಚರಣೆಗಳನ್ನು ಮುಂದುವರಿಸುವ ಗುರುತರ ಜವಾಬ್ದಾರಿ ಇದೆ. ಆಧುನಿಕತೆಗೆ ಹೊಂದಿಕೊಂಡು ನಮ್ಮ ಸಂಸ್ಕೃತಿಯನ್ನು ಪೋಷಿಸುವುದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ ಎಂದು ಹೇಳಿದರು. ನಾಡಿನ ಏಳಿಗೆಗಾಗಿ ತನ್ನ ಕೈಲಾದ ಎಲ್ಲಾ ರೀತಿಯ ಸಹಾಯ ಮಾಡುವುದಾಗಿ ಇದೇ ಸಂದರ್ಭದಲ್ಲಿ ಶಾಸಕರು ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಶಾಸಕ ಎ.ಎಸ್.ಪೊನ್ನಣ್ಣ ಹಾಗೂ ಹಿರಿಯ ಪತ್ರಕರ್ತ ಎಂ.ಎ.ಪೊನ್ನಪ್ಪ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಕ್‌ಗ್ಗಟ್‌ನಾಡ್ ಕೊಡವ ಸಂಘದ ಅಧ್ಯಕ್ಷರು, ಸದಸ್ಯರು, ಪದಾಧಿಕಾರಿಗಳು ಹಾಗೂ ಪ್ರಮುಖರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.








