
ನಾಪೋಕ್ಲು ಜು.28 NEWS DESK : ಹೋಬಳಿ ವ್ಯಾಪ್ತಿಯಲ್ಲಿ ಕಳೆದೆರಡು ದಿನಗಳಿಂದ ಬಿರುಸಿನ ಮಳೆಯಾಗಿದ್ದು ಭಾನುವಾರ ಕೊಂಚ ಕಡಿಮೆಯಾಗಿದೆ. ಗಾಳಿ ಮಳೆಯಿಂದ ಅಲ್ಲಲ್ಲಿ ವಾಸದ ಮನಗಳಿಗೆ ಹಾನಿ ಉಂಟಾಗಿದ್ದು, ಕೆಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ನಾಪೋಕ್ಲು, ಮೂರ್ನಾಡು ಸಂಪರ್ಕ ರಸ್ತೆಯ ಬೋಳಿಬಾಣೆ ಎಂಬಲ್ಲಿ ಕಾವೇರಿ ಪ್ರವಾಹ ರಸ್ತೆಯ ಮೇಲೆ ಹರಿಯುತ್ತಿರುವುದರಿಂದ ಸಂಪರ್ಕ ಸ್ಥಗಿತಗೊಂಡಿದೆ, ಕೊಟ್ಟಮುಡಿ ಜಂಕ್ಷನ್ ಸಮೀಪ ಮೂರ್ನಾಡು ರಸ್ತೆಯಲ್ಲಿ ಕಾವೇರಿ ನದಿ ದಡದಲ್ಲಿರುವ ಶೆಡ್ ಜಲಾವೃತವಾಗಿ ಮುಳುಗಡೆಯಾಗಿದೆ. ನಾಪೋಕ್ಲು, ಕಲ್ಲುಮೊಟ್ಟೆ ಸಂಪರ್ಕ ರಸ್ತೆಯಲ್ಲಿರುವ ಚೆರಿಯಪರಂಬು ಎಂಬಲ್ಲಿ ರಸ್ತೆಯೂ ಕಾವೇರಿ ಪ್ರವಾಹದಿಂದ ಜಲಾವೃತವಾಗಿ ಸಂಪರ್ಕ ಕಡಿತಗೊಂಡು ಇಲ್ಲಿಯ ನಿವಾಸಿಗಳು ಕೊಡವ ಸಮಾಜ ರಸ್ತೆಯನ್ನು ಅವಲಂಬಿಸಬೇಕಾದ ಅನಿವಾರ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಕಕ್ಕಬೆ ಗ್ರಾಮ ಪಂಚಾಯಿತಿಯ ಕುಂಜಿಲ ಗ್ರಾಮದ ವೈಕೋಲ್ ನಿವಾಸಿ ಅಶ್ರಫ್ ಎಂಬವರ ವಾಸದ ಮನೆಯ ಸಮೀಪ ಬರೆ ಕುಸಿದು ಸಂಕಷ್ಟ ಎದುರಾಗಿದೆ. ಇದೇ ಕುಂಜಿಲ ಗ್ರಾಮದ ನಿವಾಸಿ ಉಮ್ಮರ್ ಎಂಬವರ ಮನೆಯ ಒಂದು ಭಾಗದ ಗೋಡೆ ಮಳೆ ಗಾಳಿಯಿಂದಾಗಿ ರಾತ್ರಿ ಕುಸಿದು ನಷ್ಟ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಕಂದಾಯ ಇಲಾಖೆಯ ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲಿಸಿದರು. ಸಂಪಾಜೆ ಗ್ರಾಮದ ಚೌಕಿ ಸಮೀಪ ಶೀಲಾವತಿ ಎಂಬವರ ಮನೆಯ ಮೇಲೆ ಗಾಳಿ ಮಳೆಗೆ ಅಡಿಕೆ ಮರ ಬಿದ್ದು ಮನೆಯ ಚಾವನಿಗೆ ಅಳವಡಿಸಿದ ಸಿಮೆಂಟ್ ಶೀಟುಗಳು ಮುರಿದು ಬಿದ್ದು ಮನೆಗೆ ಹಾನಿಯಾಗಿ ನಷ್ಟ ಸಂಭವಿಸಿದೆ. ಬಲ್ಲಮಾವಟ್ಟಿ ಗ್ರಾಮ ಪಂಚಾಯತಿಯ ಕೀಯಲ್ಕೇರಿ ಸಂಪರ್ಕ ರಸ್ತೆಯ ಮೇಲೆ ಭಾನುವಾರ ಬಾರಿ ಗಾತ್ರದ ಮರ ಒಂದು ಉರುಳಿ ಬಿದ್ದು ಸಂಪರ್ಕ ಸಂಪೂರ್ಣ ಸ್ಥಗಿತಗೊಂಡಿದೆ. ಇದರಿಂದಾಗಿ ಹಲವು ವಿದ್ಯುತ್ ಕಂಬಗಳು ಮುರಿದು ವಿದ್ಯುತ್ತು ಕಡಿತಗೊಂಡು ಈ ವ್ಯಾಪ್ತಿಯಲ್ಲಿ ಕಗ್ಗತ್ತಲು ಆವರಿಸಿ ಸಮಸ್ಯೆ ಎದುರಾಗಿದ್ದು ಕೆಪಿಟಿಸಿಎಲ್ ಹಾಗೂ ಗ್ರಾಮ ಪಂಚಾಯಿತಿ ಕೂಡಲೇ ಸಮಸ್ಯೆಯನ್ನು ಬಗೆಹರಿಸಿ ಕೊಡುವಂತೆ ಗ್ರಾಮದ ನಿವಾಸಿ ಬೊಟ್ಟೋಳಂಡ ಶರಿ ಮೇದಪ್ಪ ಒತ್ತಾಯಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.










