
ಮಡಿಕೇರಿ ಜು.28 NEWS DESK : ಗ್ರಾಮ ಪಂಚಾಯ್ತಿಗಳ ನೌಕರರಿಗೆ ಕನಿಷ್ಠ ವೇತನ ಜಾರಿ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಗ್ರಾಮ ಪಂಚಾಯ್ತಿ ನೌಕರರ ಸಂಘದ ಕೊಡಗು ಜಿಲ್ಲಾ ಘಟಕ ಜಿಲ್ಲಾಧಿಕಾರಿಗಳ ಕಛೇರಿ ಎದುರು ಪ್ರತಿಭಟನೆ ನಡೆಸಿತು. ಗ್ರಾಮ ಪಂಚಾಯ್ತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರ ನೇತೃತ್ವದಲ್ಲಿ ಪದಾಧಿಕಾರಿಗಳು ಹಾಗೂ ಗ್ರಾಮ ಪಂಚಾಯ್ತಿ ನೌಕರರು ಇಂದು ಬೆಳಗ್ಗೆ ಜಿಲ್ಲಾಡಳಿತದ ಭವನದ ಎದುರು ಸೇರಿ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಪಿ.ಆರ್.ಭರತ್ ಮಾತನಾಡಿ, ಗ್ರಾಮ ಪಂಚಾಯ್ತಿಯ ಕರವಸೂಲಿಗಾರ, ಗುಮಾಸ್ತ, ಕ್ಲರ್ಕ್ ಕಂ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ಮೂಲ ವೇತನವನ್ನು 38,021-86 ಎಂದು ನಿಗದಿ ಪಡಿಸಬೇಕು, ವಾಟರ್‍ಮೆನ್, ಪಂಪ್ ಆಪರೇಟರ್ ಕಂ ಮೆಕ್ಯಾನಿಕ್ ಹುದ್ದೆಗಳಿಗೆ ಮೂಲ ವೇತನವನ್ನು 33,062-50 ಎಂದು ಹಾಗೂ ಅಟೆಂಡರ್, ಜವಾನರುಗಳ ಮೂಲ ವೇತನವನ್ನು 28,750 ಎಂದು ನಿಗದಿ ಪಡಿಸಿ ಪ್ರಸಕ್ತ ಸಾಲಿನ ಏಪ್ರಿಲ್ 1ರಿಂದ ಅನ್ವಯವಾಗುವಂತೆ ಜಾರಿ ಮಾಡಬೇಕೆಂದು ಆಗ್ರಹಿಸಿದರು. *ಕಾರ್ಮಿಕ ನಿರೀಕ್ಷಕರ ನೇಮಕವಾಗಲಿ* ಗ್ರಾಮ ಪಂಚಾಯ್ತಿ ನೌಕರರರು 23 ಪ್ರಮುಖ ಬೇಡಿಕೆಗಳಿಗಾಗಿ ಕಳೆದ 2023ನೇ ಸಾಲಿನಿಂದ ಹೋರಾಟಗಳನ್ನು ನಡೆಸಿಕೊಂಡು ಬಂದಿದ್ದರು ಬೇಡಿಕೆಗಳು ಈಡೇರಿಲ್ಲ. ಗುಡ್ಡಗಾಡು ಪ್ರದೇಶವಾದ ಕೊಡಗಿನಲ್ಲಿ ಕೂಲಿ ಕಾರ್ಮಿಕ ಸಮೂಹ ಹೆಚ್ಚಿನ ಸಂಖ್ಯೆಯಲ್ಲಿದೆ. ಅಸಂಘಟಿತ ವಲಯಕ್ಕೆ ಸೇರಿದ ಕಾರ್ಮಿಕರು ಕಾರ್ಮಿಕ ಕಾನೂನುಗಳಡಿಯಲ್ಲಿ ಸಿಗಬೇಕಾದ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಜಿಲ್ಲೆಯ ಐದು ತಾಲ್ಲೂಕುಗಳ ಪೈಕಿ ಎರಡು ತಾಲ್ಲೂಕುಗಳಲ್ಲಿ ಮಾತ್ರ ಕಾರ್ಮಿಕ ನಿರೀಕ್ಷಕರಿದ್ದು, ಉಳಿದ ಮೂರು ತಾಲ್ಲೂಕುಗಳಲ್ಲಿ ಕೂಡ ಕಾರ್ಮಿಕ ನಿರೀಕ್ಷಕರನ್ನು ಮತ್ತು ಜಿಲ್ಲೆಗೆ ಕಾರ್ಮಿಕ ನ್ಯಾಯಾಧೀಶರನ್ನು ನೇಮಕ ಮಾಡಬೇಕೆಂದು ಪಿ.ಆರ್.ಭರತ್ ಒತ್ತಾಯಿಸಿದರು. *ಬೇಡಿಕೆಗಳು* ಪ್ರಮುಖವಾಗಿ ಇತರ ಇಲಾಖೆಯ ಸಿಬ್ಬಂದಿಗಳನ್ನು ಗ್ರಾಮ ಪಂಚಾಯ್ತಿ ನೌಕರರನ್ನಾಗಿ ಪರಿಗಣಿಸಬಾರದು, ಪಂಚಾಯ್ತಿ ನೌಕರರಿಗೆ ನಿವೃತ್ತಿಯಾದ ಇಲ್ಲವೆ ಮೃತಪಟ್ಟ ಹಂತದಲ್ಲಿ 6 ಸಾವಿರ ಪಿಂಚಣಿಯನ್ನು ಜಾರಿ ಮಾಡಬೇಕು, ಪಂಚಾಯ್ತಿಗಳಲ್ಲಿ ಕಾರ್ಯನಿರ್ವಹಿಸುವ ಕರವಸೂಲಿಗಾರರು, ಕ್ಲರ್ಕ್, ಡಾಟಾ ಎಂಟ್ರಿ ಆಪರೇಟರ್ಸ್, ವಾಟರ್ ಮೆನ್, ಜವಾನ, ಸ್ವಚ್ಛತಾಗಾರರನ್ನು ಏಕ ಕಾಲಕ್ಕೆ ಸರ್ಕಾರಿ ನೌಕರರನ್ನಾಗಿ ಘೋಷಿಸಬೇಕು ಎನ್ನುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿರುವ ಮನವಿ ಪತ್ರವನ್ನು ಜಿಲ್ಲಾಡಳಿತ, ಕಾರ್ಮಿಕ ಅಧಿಕಾರಿಗಳು ಹಾಗೂ ಜಿ.ಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಪ್ರತಿಭಟನೆಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಮಹದೇವ್, ಪೊನ್ನಂಪೇಟೆ ತಾಲ್ಲೂಕು ಉಪಾಧ್ಯಕ್ಷ ಸಿ.ವಿ.ದಿಲೀಪ್ ಕುಮಾರ್, ಸದಸ್ಯರುಗಳಾದ ರಂಗಸ್ವಾಮಿ, ವೀರಭದ್ರ, ಸತೀಶ್, ವಾಸು, ಯಶೋಧ, ಖಾಲಿದ್ ಮೊದಲಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.








