
ಮಡಿಕೇರಿ ಜು.30 NEWS DESK : ಲಾರಿ ಮತ್ತು ದ್ವಿಚಕ್ರ ವಾಹನದ ನಡುವೆ ಡಿಕ್ಕಿ ಸಂಭವಿಸಿ ದ್ವಿಚಕ್ರ ವಾಹನ ಚಾಲಕ ಮೃತಪಟ್ಟಿರುವ ಘಟನೆ ಕುಶಾಲನಗರ ಸಮೀಪ ಶಿರಂಗಾಲ ಶ್ರೀ ಮಂಟಿಗಮ್ಮ ದೇವಾಲಯ ಪ್ರವೇಶದ್ವಾರದ ತಿರುವಿನಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ. ಪಿರಿಯಾಪಟ್ಟಣ ತಾಲ್ಲೂಕು ಕಣಗಾಲು ಹೋಬಳಿಯ ಚಾಮರಾಯನಕೋಟೆ ಗ್ರಾಮದ ನಿವಾಸಿ ಅಶೋಕ್(36) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ. ಕೊಣನೂರು ಕಡೆಯಿಂದ ಕುಶಾಲನಗರ ಕಡೆಗೆ ಬರುತ್ತಿದ್ದ ಲಾರಿ ಹಾಗೂ ಶಿರಂಗಾಲದಿಂದ ಕೊಣನೂರು ಕಡೆಗೆ ಹೋಗುತ್ತಿದ್ದ ಸ್ಕೂಟಿ ನಡುವೆ ನಡೆದ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡ ಅಶೋಕ್ ಮೃತಪಟ್ಟರು. ಸ್ಥಳಕ್ಕೆ ಡಿವೈಎಸ್ಪಿ ಚಂದ್ರಶೇಖರ್, ವೃತ್ತ ನಿರೀಕ್ಷಕ ದಿನೇಶ್, ಸಂಚಾರಿ ಠಾಣಾಧಿಕಾರಿ ಶ್ರೀನಿವಾಸ್, ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ. ಮೃತ ಅಶೋಕ್ ಪತ್ನಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.








