
ಸುಂಟಿಕೊಪ್ಪ ಜು.31 NEWS DESK : ಮಾದಾಪುರ ಸಮೀಪದ ಗರಗಂದೂರು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ತೆರೆದಿರುವ ಕಾಳಜಿ ಕೇಂದ್ರಕ್ಕೆ ಆರೋಗ್ಯ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಸಂತ್ರಸ್ತರ ಆರೋಗ್ಯ ವಿಚಾರಿಸಿದರು. ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ.ಶ್ರೀನಿವಾಸ್ ನೇತೃತ್ವದ ಆರೋಗ್ಯ ತಂಡದಲ್ಲಿ ಮಾದಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ನಿಶಾ, ಡಾ.ದರ್ಶನ್ ಹಾಗೂ ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿಯ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವಿಶ್ವಜ್ಞಾ ಭೇಟಿ ನೀಡಿ ಸಾಂಕ್ರಾಮಿಕ ರೋಗಗಳ ಬಗ್ಗೆ ಅರಿವು ಮೂಡಿಸಿದರು. ಈ ಸಂದರ್ಭ ಜಿಲ್ಲಾ ಸರ್ವೇಕ್ಷಣ ಅಧಿಕಾರಿ ಡಾ.ಶ್ರೀನಿವಾಸ್ ಮಾತನಾಡಿ ಸಾಂಕ್ರಾಮಿಕ ಮತ್ತು ಅಸಾಂಕ್ರಾಮಿಕ ರೋಗಗಳಾದ ಅಧಿಕ ರಕ್ತ ದೊತ್ತಡ, ಹೃದಯ ಸಂಬಂಧಿ ಖಾಯಿಲೆ, ಮಧುಮೇಹ, ಕ್ಯಾನ್ಸರ್, ಪಾಶ್ರ್ವ ವಾಯುವಿನ ಬಗ್ಗೆ ಮಾಹಿತಿ ನೀಡಿ, ಅವುಗಳನ್ನು ತಡೆಗಟ್ಟುವ ಕುರಿತು ಸಲಹೆ ನೀಡಿದರು. ಮಳೆಗಾಲದಲ್ಲಿ ಹರಡಬಹುದಾದ ಖಾಯಿಲೆಗಳ ಬಗ್ಗೆ, ವೈಯುಕ್ತಿಕ ಶುಚಿತ್ವ, ರಕ್ತ ಹೀನತೆಯ ಬಗ್ಗೆ ತಿಳಿಸಿದರು. ತಾಲ್ಲೂಕು ಹಿರಿಯ ಆರೋಗ್ಯ ನಿರೀಕ್ಷಣ ಅಧಿಕಾರಿ ವಿಶ್ವಜ್ಞಾ ಮಾತನಾಡಿ, ಡೆಂಗ್ಯೂ ಜ್ವರದ ಲಕ್ಷಣಗಳ ಹಾಗೂ ಮುಂಜಾಗ್ರತ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ಅಲ್ಲದೆ ಅತಿಸಾರ ಭೇದಿ ನಿಯಂತ್ರಣದ ಕುರಿತು ತಿಳಿಸಿದರು. ಮಾದಾಪುರ ಆರೋಗ್ಯ ನಿರೀಕ್ಷಣಾಧಿಕಾರಿ ಶಿವಪ್ಪ ಮಾತನಾಡಿ, ಚಿಕೂನ್ ಗುನ್ಯಾ ಜ್ವರ, ರಾಷ್ಟ್ರೀಯ ಕ್ಷಯರೋಗ ನಿರ್ಮೂಲನಾ ಕಾರ್ಯಕ್ರಮ, ರಾಷ್ಟ್ರೀಯ ಕುಷ್ಟರೋಗ ನಿರ್ಮೂಲನೆ, ನಾಯಿ ಹಾಗೂ ಹಾವು ಕಡಿತದ ಬಗ್ಗೆ ಮಾಹಿತಿ ನೀಡಿದರು. ಪ್ರಯೋಗ ಶಾಲಾ ತಂತ್ರಜ್ಞರಾದ ಪ್ರಜ್ವಲ್, ಸಮುದಾಯ ಆರೋಗ್ಯ ಅಧಿಕಾರಿ ಶಫಿನಾ, ಆಶಾ ಕಾರ್ಯಕರ್ತೆ ಪ್ರೇಮಾ ಹಾಗೂ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ಪ್ರಾಂಶುಪಾಲರು ಮತ್ತು ಸಹ ಶಿಕ್ಷಕರು ಇದ್ದರು.








