
ನಾಪೋಕ್ಲು ಆ.1 NEWS DESK : ಜಿಲ್ಲೆಯ ಅತ್ಯಂತ ಎತ್ತರದ ಬೆಟ್ಟ ಭಾಗಮಂಡಲ ವಲಯದ ಕಕ್ಕಬೆ ಉಪವಲಯ ವ್ಯಾಪ್ತಿಯಲ್ಲಿ ತಡಿಯಂಡಮೋಳ್ ಬೆಟ್ಟಕ್ಕೆ ತಾತ್ಕಾಲಿಕವಾಗಿ ಮುಂದಿನ ಆದೇಶದವರೆಗೆ ಚಾರಣ ನಿರ್ಬಂಧಿಸಲಾಗಿದೆ. ಕಳೆದ ಕೆಲವು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪದಿಂದಾಗಿ ಮಾನವ ಪ್ರಾಣ ಹಾನಿ, ಜಾನುವಾರುಗಳ ಪ್ರಾಣಹಾನಿ, ಮೂಲಭೂತ ಸೌಕರ್ಯಗಳು ಹಾನಿಯಾಗುವಂತಹ ಪ್ರಕರಣಗಳು ವರದಿಯಾಗಿದ್ದು, ಮುಂಜಾಗ್ರತ ಕ್ರಮವಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಬಿರುಸಿನ ಮಳೆಯಾಗುತ್ತಿರುವುದರಿಂದ ಮಳೆ ಗಾಳಿಯಿಂದಾಗಿ ಅಪಾಯಕಾರಿ ಹಂತದಲ್ಲಿರುವ ಮರದ ರೆಂಬೆ ಕೊಂಬೆಗಳು ರಸ್ತೆ ಮೇಲೆ ಅಥವಾ ಸಂಚರಿಸುವ ಮಾರ್ಗದಲ್ಲಿ ಮುರಿದು ಬಿದ್ದು ಪ್ರಾಣಾಪಾಯವಾಗುವ ಸಂಭವ ಇದೆ. ಆದ್ದರಿಂದ ಮುಂಜಾಗ್ರತಾ ಕ್ರಮವಾಗಿ ಮುಂಗಾರು ಅವಧಿ ಮುಕ್ತಾಯಗೊಳ್ಳುವವರೆಗೆ ಅರಣ್ಯ ವ್ಯಾಪ್ತಿಯಲ್ಲಿ ಚಾರಣವನ್ನು ನಿಷೇಧಿಸಲಾಗಿದೆ. ಮಡಿಕೇರಿ ಪ್ರಾದೇಶಿಕ ವಿಭಾಗ ವ್ಯಾಪ್ತಿಯ ಭಾಗಮಂಡಲ ವಲಯದ ಕಕ್ಕಬೆ ಉಪವಲಯ ವ್ಯಾಪ್ತಿಯಲ್ಲಿ ತಡಿಯಂಡಮೋಳ್ ಬೆಟ್ಟದಲ್ಲಿ ಚಾರಣ ತೆರಳಲು ಇಲಾಖೆ ಅನುಮತಿ ಪಡೆಯಲು ಅತಿಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿದ್ದಾರೆ. ಪ್ರಸ್ತುತ ಬೆಟ್ಟದ ಪ್ರದೇಶದಲ್ಲಿ ಅತಿಯಾಗಿ ಮಳೆ ಆಗುತ್ತಿದ್ದು, ಮೋಡ ಮತ್ತು ಮಂಜು ಕವಿದುಕೊಂಡಿರುವ ಕಾರಣ ರಸ್ತೆಗಳು ಸರಿಯಾಗಿ ಕಾಣದೆ ಪ್ರವಾಸಿಗರು ದಿಕ್ಕು ತಪ್ಪು ಸಾಧ್ಯತೆ ಇದೆ/ ಅಲ್ಲವೇ ಕಾಡು ಪ್ರಾಣಿಗಳ ಓಡಾಟ ಕೂಡ ಇರುವುದರಿಂದ ಮಳೆಗಾಲ ಮುಗಿಯುವಲ್ಲಿ ವರೆಗೆ ಚಾಣಕ್ಕೆ ಬರುವ ಪ್ರವಾಸಿಗರಿಗೆ ನಿರ್ಬಂಧ ವಿಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ವರದಿ : ದುಗ್ಗಳ ಸದಾನಂದ.









