
ಸುಂಟಿಕೊಪ್ಪ ಆ.4 NEWS DESK : ಸುಂಟಿಕೊಪ್ಪ ಹೋಬಳಿಯ ಗದ್ದೆಹಳ್ಳದಲ್ಲಿ ‘ಗದ್ದೆ ಆಟ’ ಎಂಬ ವಿನೂತನ ಕಾರ್ಯಕ್ರಮ ಗಮನ ಸೆಳೆಯಿತು. ಹಿರಿಯ ರಾಜಕಾರಣಿ ಸಮಾಜ ಸೇವಕರಾದ ಯಂಕನ ವೈ. ಕರುಂಬಯ್ಯ ಅವರ ಗದ್ದೆಯಲ್ಲಿ 3 ವರ್ಷದಿಂದ 60 ವರ್ಷ ಮೇಲ್ಪಟ್ಟವರಿಗೂ ಮುಕ್ತ ಕೆಸರು ಗದ್ದೆ ಓಟ, ರಿಲೆ, ಹಗ್ಗ ಜಗ್ಗಾಟ,ಮಹಿಳೆಯರು ಪುರುಷರಿಗೆ ಕಾಲ್ನಡಿಗೆ ಸ್ಪರ್ಧೆಗಳು ನಡೆಯಿತು. ಮಕ್ಕಳು, ಹಿರಿಯರು, ಕಿರಿಯರು ಸ್ಪರ್ಧೆಯಲ್ಲಿ ಪಾಲ್ಗೊಂಡು ಸಂಭ್ರಮಸಿದರು. ಫನ್‍ಗೆಮ್ಸ್ ಎಂಬ ಸ್ಪರ್ಧೆಯಲ್ಲಿ ದಂಪತಿಗಳು ಪಾಲ್ಗೊಂಡಿದ್ದರು. ಒಂದೇ ಕುಟುಂಬದ ತಾಯಿ, ತಂದೆ, ಮಗ, ಮಗಳು ಒಗ್ಗೂಡಿ ಸೇರಿ ತಿರುಗಿ ಓಟ ಎಂಬ ಸ್ಪರ್ಧೆ ಕುತೂಲಹ ಮೂಡಿಸಿತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕ ವೈ.ಎಂ.ಕರುಂಬಯ್ಯ, ರೈತರೇ ದೇಶದ ಬೆನ್ನಲುಬು. ರೈತಾಪಿ ವರ್ಗದಿಂದ ದೇಶದ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ ಭತ್ತದ ಗದ್ದೆಯನ್ನು ಪಾಳು ಬಿಡದಂತೆ ಅವರು ಕರೆ ನೀಡಿದರು. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಮಾತನಾಡಿ, ರೈತರಿಗೆ ಕೆಸರುಗದ್ದೆ ಕ್ರೀಡಾಕೂಟವನ್ನು ಆಯೋಜಿಸಿದ್ದು ಶ್ಲಾಘನೀಯವಾದದ್ದು, ಇದರಿಂದ ಕೃಷಿಕರಿಗೆ ಹೆಚ್ಚಿನ ಉತ್ತೇಜನ ದೊರಕಿದಂತಾಗಿದೆ ಎಂದು ಅವರು ಹೇಳಿದರು.









