
ನಾಪೋಕ್ಲು ಆ.4 NEWS DESK : ಹದಿನೆಂಟು ಬಗೆಯ ಔಷಧೀಯ ಗುಣಗಳು ಹೊಂದಿರುವ ಮದ್ದುಸೊಪ್ಪಿನ ಬಳಕೆಯ ಆಚರಣೆ ಕಕ್ಕಡ-18 ಅನ್ನು ವೈಶಿಷ್ಟಪೂರ್ಣವಾಗಿ ಆಚರಿಸಬೇಕು ಎಂದು ಕೊಡವ ಸಮಾಜದ ಅಧ್ಯಕ್ಷ ಮುಂಡಂಡ ಸಿ.ನಾಣಯ್ಯ ಹೇಳಿದರು. ನಾಪೋಕ್ಲು ಕೊಡವ ಸಮಾಜದ ಪೊಮ್ಮಕ್ಕಡ ಪರಿಷತ್ ವತಿಯಿಂದ ಕೊಡವ ಸಮಾಜದ ಹರದಾಸ ಅಪ್ಪನೆರವಂಡ ಅಪ್ಪಚ್ಚ ಕವಿ ಸಭಾಂಗಣದಲ್ಲಿ ನಡೆದ ಕಕ್ಕಡ-18 ತೀನಿ ನಮ್ಮೆ ಸ್ಪರ್ಧೆ ಮತ್ತು ಪ್ರದರ್ಶನ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಅವರು ಮಾತನಾಡಿದರು. ಹಿಂದೆ ಭತ್ತದ ಕೃಷಿ ಮಾಡುವ ರೈತರಲ್ಲಿ ಸಂತೋಷ, ಸಂಭ್ರಮ ಇತ್ತು. ಇಂದು ಅದೆಲ್ಲವೂ ಮರೆಯಾಗಿದೆ ಮಕ್ಕಳಿಗೆ ಕೃಷಿ ಚಟುವಟಿಕೆಗಳಲ್ಲಿ ಆಸಕ್ತಿ ಇಲ್ಲ. ರೈತರಿಗೆ ಖುಷಿ, ತೃಪ್ತಿ ಇಲ್ಲ. ಗದ್ದೆಗಳೆಲ್ಲ ಪಾಳುಬಿದ್ದಿವೆ. ಒಂದಷ್ಟು ಭಾಗ ಅಡಿಕೆ, ಕಾಫಿ ತೋಟಗಳಾಗಿವೆ. ಗತವೈಭವದ ಸಂತೋಷ, ಸಂಭ್ರಮವನ್ನು ಕಾಣಬೇಕಿದ್ದರೆ ಇಂದಿನ ಯುವ ಜನರು ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದರು. ಭತ್ತದ ಗದ್ದೆಗಳಲ್ಲಿ ಅಗೆ ತೆಗೆಯುವುದು, ನಾಟಿ ಮಾಡುವುದು ಹೇಗೆ ಎಂಬ ಬಗ್ಗೆ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ತರಬೇತಿ ನೀಡುವ ಅಗತ್ಯವಿದೆ ಎಂದರು. ಕಾರ್ಯಕ್ರಮವನ್ನು ಕೊಳಕೇರಿಯ ಕಾಫಿ ಬೆಳೆಗಾರ್ತಿ ಬಿದ್ದಾಟಂಡ ಸುಮನ್ ಪ್ರದೀಪ್ ಉದ್ಘಾಟಿಸಿ ಮಾತನಾಡಿ, ನಿಸರ್ಗದತ್ತವಾದ ಆಹಾರ ಬಳಕೆ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. ಕೊಡಗಿನಲ್ಲಿ ಕೊಡಗಿನ ಹವಗುಣಕ್ಕೆ ತಕ್ಕಂತೆ ಆಹಾರ ಪದ್ದತಿ ಕ್ರಮ ಇದ್ದು, ಅದನ್ನು ನಮ್ಮ ಹಿರಿಯರು ಪಾಲಸಿಕೊಂಡು ಇಲ್ಲಿಯವರೆಗೆ ಬಂದಿದ್ದಾರೆ. ಇನ್ನು ಮುಂದಕ್ಕೂ ಕೂಡ ಈ ಪದ್ದತಿ ಮುಂದುವರಿಯಬೇಕು. ಕೊಡಗಿನ ಮಹಿಳೆಯರು ಅಡುಗೆ ತಯಾರಿಸುವಲ್ಲಿ ನೈಪುಣ್ಯತೆ ಹೊಂದಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರು ಮುಂದೆ ಬರಬೇಕು. ಒಗ್ಗಟ್ಟು, ಐಕ್ಯತೆಯನ್ನು ಕಾಪಾಡಿಕೊಳ್ಳಬೇಕು ಎಂದರು. ಬ್ಯಾಂಕ್ ಆಫ್ ಮಹಾರಾಷ್ಟ್ರದ ನಿವೃತ್ತ ವ್ಯವಸ್ಥಾಪಕಿ ಕೋಡಿಮಣಿಯಂಡ ರಚನ ಕುಟ್ಟಪ್ಪ ಮಾತನಾಡಿ, ಸಂಸಾರವನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಜವಾಬ್ದಾರಿ ಮಹಿಳೆಯರದ್ದು, ಕಕ್ಕಡ 18ರ ತಿನಿಸುಗಳ ಹಬ್ಬ ಎಲ್ಲರೂ ಸಂಘಟಿತರಾಗಲು ಒಂದು ಉತ್ತಮ ವೇದಿಕೆಯಾಗಿದೆ. ಸಂಘ ಸಂಸ್ಥೆಗಳ ನೆರವಿನಿಂದ ಕೃಷಿ ಚಟುವಟಿಕೆಗಳ ಪುನಃ ಚೇತನ ಅಗತ್ಯವಿದೆ ಎಂದರು. ಕೊಡವ ಸಮಾಜ ಪೊಮ್ಮಕ್ಕಡ ಪರಿಷತ್ ಅಧ್ಯಕ್ಷೆ ಬಾಳೆಯಡ ನಿಷಾ ಮೇದಪ್ಪ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಿತು. ತಿನಿಸುಗಳ ಪ್ರದರ್ಶನವನ್ನು ನೆಲಜಿ ಮಹಿಳಾ ಸಮಾಜದ ಮಾಜಿ ಅಧ್ಯಕ್ಷೆ ಮಣವಟ್ಟಿರ ಕಮಲ ಬೆಳ್ಳಪ್ಪ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ನರ್ಸಿಂಗ್ ಸೂಪರಿಟೆಂಡೆಂಟ್ ಗ್ರೇಡ್ 2, ಬಾಳೆಯಡ ರತಿ ಪೆಮ್ಮಯ್ಯ ಹಾಗೂ ಗೋಣಿಕೊಪ್ಪದ ಕಾವೇರಿ ಕಾಲೇಜಿನ ಉಪನ್ಯಾಸಕಿ ಡಾ.ಚೀಯಕಪೂವಂಡ ಸವಿತ ಅಪ್ಪಚ್ಚು ಅವರನ್ನು ಪರಿಷತ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಕ್ಕಡ ತೀನಿರ ಭೋಜ ಎಂಬ ವಿಷಯದ ಕುರಿತು ಪುಲಿಕೋಟು ಗ್ರಾಮದ ಲೇಖಕಿ ಕರವಂಡ ಸೀಮಾ ಗಣಪತಿ ವಿಚಾರ ಮಂಡಿಸಿದರು. ಕಾರ್ಯಕ್ರಮದಲ್ಲಿ ಕೊಡವ ತಿನಿಸುಗಳ ಪ್ರದರ್ಶನ ಮತ್ತು ತಯಾರಿ ಸ್ಪರ್ಧೆ ಹಾಗೂ ಇನ್ನಿತರ ಕ್ರೀಡೆ ಮತ್ತು ಸಂಸ್ಕೃತಿಕ ಕಾರ್ಯಕ್ರಮಗಳು ಜರುಗಿ ವಿಜೇತರಾದವರಿಗೆ ಗಣ್ಯರು ಬಹುಮಾನವನ್ನು ವಿತರಿಸಿ ಶುಭ ಹಾರೈಸಿದರು. ಬಿದ್ದಾಟಂಡ ಮೇರಿ ಚಿಟ್ಟಿಯಪ್ಪ, ಕನ್ನಂಬೀರ ಸ್ವರ್ಣ, ಕೋಟೆರ ಬಾನು ತೀರ್ಪುಗಾರರಾಗಿ (ಜಡ್ಜರ್ಸ್ ಕಾರ್ಯನಿರ್ವಹಿಸಿದರು). ಅರೆಯಡ ಸರಸು ಚರ್ಮನ ಅವರು ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡ ಕಾರ್ಯಕ್ರಮವನ್ನು ಕೋಟೆರ ಝಾನ್ಸಿ ಮಂದಪ್ಪ ಸ್ವಾಗತಿಸಿ ಬಿದ್ದಾಟಂಡ ಮಮತಾ ಚಿಣ್ಣಪ್ಪ ಮತ್ತು ಕದ್ದನಿಯಂಡ ವಂದನಾ ಚಿನ್ನಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು. ಕರವಂಡ ಸರಸು ಪೆಮ್ಮಯ್ಯ, ಮುಕ್ಕಾಟಿರ ರೇಷ್ಮಾ, ಕಾಂಡಂಡ ಪ್ರತಿಜಾ ಅಚ್ಚಪ್ಪ, ಪೆಮ್ಮಂಡ ಕೌಶಿ ಕಾವೇರಮ್ಮ, ನಾಯಕಂಡ ಜೋಬಿ ತಿಮ್ಮಯ್ಯ ಅತಿಥಿಗಳನ್ನು ಸಭೆಗೆ ಪರಿಚಯಿಸಿ ಕಲಿಯಂಡ ಗೀತಾ ಗಿರೀಶ್ ವಂದಿಸಿದರು.
ವರದಿ : ದುಗ್ಗಳ ಸದಾನಂದ.








