
ಸೋಮವಾರಪೇಟೆ ಆ.4 NEWS DESK : ಜಕ್ಕನಳ್ಳಿ ಗ್ರಾಮದಲ್ಲಿ ಸಿ ಆ್ಯಂಡ್ ಡಿ ಭೂಮಿಯ ಸೆಕ್ಷನ್-5 ಸರ್ವೆಗೆ ಕೃಷಿಕರಿಗೆ ನೋಟೀಸ್ ಬಂದಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ಜಾಗೃತಿ ಸಭೆ ನಡೆಸಿ ಚರ್ಚೆ ನಡೆಸಿದರು. ತಾಲ್ಲೂಕು ರೈತ ಹೋರಾಟ ಸಮಿತಿಯ ಅಧ್ಯಕ್ಷ ಕೆ.ಬಿ.ಸುರೇಶ್ ಮಾತನಾಡಿ, ಹಲವು ದಶಕಗಳಿಂದ ರೈತರು ವ್ಯವಸಾಯ ಮಾಡುತ್ತಿರುವ ಸಿ ಆ್ಯಂಡ್ ಡಿ ವ್ಯವಸಾಯಕ್ಕೆ ಯೋಗ್ಯವಾದ ಸರ್ಕಾರಿ ಭೂಮಿಯಾಗಿದೆ. ದಾಖಲೆಗಳಲ್ಲಿ ಸಿ ಆ್ಯಂಡ್ ಡಿ ಭೂಮಿ ವ್ಯವಸಾಯಕ್ಕೆ ಯೋಗ್ಯವಲ್ಲ ಎಂಬ ಕಾರಣದಿಂದ ಅರಣ್ಯ ಇಲಾಖೆಗೆ ಸೇರಿಸಲಾಗಿದೆ. ಸಿ ಆ್ಯಂಡ್ ಡಿ ಯನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡರೆ, ಕೊಡಗಿನ ಬಹುತೇಕ ರೈತರು ಆಸ್ತಿ ಕಳೆದುಕೊಂಡು ಗುಳೆ ಹೋಗಬೇಕಾದ ಅನಿವಾರ್ಯತೆ ಒದಗಲಿದೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ರೈತರನ್ನು ರಕ್ಷಣೆ ಮಾಡುವಂತಹ ಎಲ್ಲಾ ಅವಕಾಶಗಳಿವೆ. ಈಗಾಗಲೆ ಸಿ ಆ್ಯಂಡ್ ಡಿ ಭೂಮಿಗೆ ಹಕ್ಕುಪತ್ರ ಪಡೆದುಕೊಳ್ಳಲು ಹೋರಾಟ ನಡೆಯುತ್ತಿದೆ ಎಂದರು. ಸರ್ವೆಗೆ ನೋಟೀಸು ಬಂದರೆ ಪ್ರತಿಯೊಬ್ಬ ರೈತರು ಸಂಬಂಧಿಸಿದ ಸಕ್ಷಮ ಪ್ರಾಧಿಕಾರಕ್ಕೆ ತಕರಾರು ಅರ್ಜಿಗಳನ್ನು ಸಲ್ಲಿಸಬೇಕೆಂದು ಎಂದು ಹೇಳಿದರು. ಈಗಾಗಲೇ ಸಮಸ್ಯೆಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲಾಗಿದೆ. ಕಾನೂನಿನ ಮೂಲಕವು ಹೋರಾಟವನ್ನು ಮುಂದುವರಿಸಲಾಗುತ್ತದೆ. ರೈತರು ಭಯಭೀತರಾಗಬಾರದು. ಹೋರಾಟ ಮಾಡಿಯಾದರೂ ಕೃಷಿ ಭೂಮಿಯನ್ನು ಉಳಿಸಿಕೊಳ್ಳಬೇಕು ಎಂದು ಹೇಳಿದರು. ಸಮಿತಿಯ ಪದಾಧಿಕಾರಿಗಳಾದ ಪೃಥ್ವಿ ಗೌಡಳ್ಳಿ, ಹರಗ ಆದಿತ್ಯ, ಜಕ್ಕನಳ್ಳಿ ಗ್ರಾಮಾಭಿವೃದ್ಧಿ ಸಮಿತಿ ಅಧ್ಯಕ್ಷ ನಂದೀಶ ಹಾಗೂ ಗ್ರಾಮಸ್ಥರು ಇದ್ದರು.








