
ನಾಪೋಕ್ಲು ಆ.7 NEWS DESK : ನಾಪೋಕ್ಲು ಹಿಂದೂ ಮಲಯಾಳಿ ಸಂಘದ ವತಿಯಿಂದ ಸಮಸ್ತ ಹಿಂದು ಬಾಂಧವರಿಗಾಗಿ ಜಿಲ್ಲಾಮಟ್ಟದ ಹಗ್ಗ ಜಗ್ಗಾಟ ಸ್ಪರ್ಧೆಯನ್ನು ಆ.17ರಂದು ಸಮೀಪದ ಹಳೆ ತಾಲೂಕಿನ ಜಿಎಂಪಿ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ನಾಪೋಕ್ಲು ಹಿಂದೂ ಮಲಯಾಳಿ ಸಂಘದ ಅಧ್ಯಕ್ಷ ಕೆ.ಕೆ.ಅನಿಲ್ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪುರುಷರಿಗೆ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾಗಿ ಹಗ್ಗಜಗ್ಗಾಟ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಅಂದು ಬೆಳಿಗ್ಗೆ ಸ್ಪರ್ಧೆಯನ್ನು ಉದ್ಘಾಟಿಸಲಾಗುವುದು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ನಾಪೋಕ್ಲು ಪೊಲೀಸ್ ಠಾಣೆಯ ಠಾಣಾಧಿಕಾರಿ ರಾಘವೇಂದ್ರ ,ಶ್ರೀ ಪೊನ್ನು ಮುತ್ತಪ್ಪ ದೇವಾಲಯದ ಅಧ್ಯಕ್ಷ ಎ.ಕೆ.ಚಂದ್ರ, ಕಾಫಿ ಬೆಳೆಗಾರರಾದ ಅಪ್ಪಚೆಟ್ಟೋಳಂಡ ನವೀನ್ ಅಪ್ಪಯ್ಯ, ಚೀಯಕಪೂವಂಡ ಎಸ್. ಮಂಜುನಾಥ್ (ಕಟ್ಟಿ)ಹಾಗೂ ವಕೀಲ ಕೋಡಿಮಣಿಯಂಡ ಕುಟ್ಟಪ್ಪ ಉಪಸ್ಥಿತರಿರುವರು ಎಂದರು. ಸಮಾರೋಪ ಸಮಾರಂಭ ಕಾರ್ಯಕ್ರಮವು ಸಂಜೆ 4 ಗಂಟೆಗೆ ಜರುಗಲಿದ್ದು, ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಕೆ.ಕೆ.ಅನಿಲ್ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ, ಹಾಗೂ ಶಾಸಕರಾದ ಎ ಎಸ್ ಪೊನ್ನಣ್ಣ ಸೇರದಂತೆ ಇನ್ನಿತರ ಗಣ್ಯರು ಭಾಗವಹಿಸಲಿದ್ದಾರೆ ಎಂದರು ಈ ಸಂದರ್ಭ ಹಿಂದೂ ಮಲಯಾಳಿ ಸಂಘದ ಮಹಿಳಾ ಘಟಕದ ವತಿಯಿಂದ “ತಿರುವಾದಿರ ನೃತ್ಯ” ಪ್ರದರ್ಶನ ಜರುಗಲಿದೆ ಎ0ದು ಮಾಹಿತಿ ನೀಡಿದರು. ಸಂಘದ ಕಾರ್ಯದರ್ಶಿ ರಮೇಂದ್ರ ಮಾತನಾಡಿ, ಪುರುಷರಿಗಾಗಿ ಆಯೋಜಿಸಲಾಗಿರುವ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ಮೊದಲ ಬಹುಮಾನ ರೂ 33,333 ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಗುವುದು. ದ್ವಿತೀಯ ಬಹುಮಾನ 22,222 ರೂ. ನಗದು ಹಾಗೂ ಆಕರ್ಷಕ ಟ್ರೋಫಿ,ತೃತೀಯ ಸ್ಥಾನ ಪಡೆದ ತಂಡಕ್ಕೆ ನಗದು 11,111ರೂ.ನಗದುಹಾಗೂ ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು ಎಂದರು. ಮಹಿಳೆಯರಿಗಾಗಿ ಆಯೋಜಿಸಲಾಗಿರುವ ಸ್ಪರ್ಧೆಯಲ್ಲಿ ವಿಜೇತ ತಂಡಕ್ಕೆ ರೂ.11,111 ನಗದುಹಾಗೂ ಆಕರ್ಷಕ ಟ್ರೋಫಿ ಮತ್ತು ಎರಡನೇ ಸ್ಥಾನ ಪಡೆದ ತಂಡಕ್ಕೆ 5,555 ರೂ ನಗದು ಹಾಗೂ ಆಕರ್ಷಕ ಟ್ರೋಫಿಯನ್ನು ವಿತರಿಸಲಾಗುವುದು ಎಂದರು. ಇದು ಕೊಡಗು ಜಿಲ್ಲೆಯ ಆಟಗಾರರಿಗೆ ಮಾತ್ರ ಸೀಮಿತವಾಗಿರುತ್ತದೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಬಯಸುವ ಆಟಗಾರರು ಮೂಲ ಆಧಾರ್ ಕಾರ್ಡ್ ಪ್ರತಿಯನ್ನು ಕಡ್ಡಾಯವಾಗಿ ತರಬೇಕು ಎಂದು ಸಂಘಟಕರು ತಿಳಿಸಿದ್ದಾರೆ. ನೊಂದಣಿಗೆ ಕೆ.ಕೆ.ಅನಿಲ್ 9663028823, ರಮೇಂದ್ರ – 9538851341 ಸಂಪರ್ಕಿಸಬಹುದಾಗಿದೆ. ಪತ್ರಿಕಾಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಅಭಿಲಾಶ್, ಖಜಾಂಚಿ ಮಣಿ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.








