
ಮಡಿಕೇರಿ NEWS DESK ಆ.8 : ಕೊಡಗು ಜಿಲ್ಲಾ ಹಿಂದು ಜಾಗರಣ ವೇದಿಕೆಯ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮ ಮಡಿಕೇರಿಯಲ್ಲಿ ನಡೆಯಿತು. ಅಖಂಡ ಭಾರತ ಸಂಕಲ್ಪ ದಿನ ಕಾರ್ಯಕ್ರಮದ ಅಂಗವಾಗಿ ನಗರದಲ್ಲಿ ಬೃಹತ್ ಪಂಜಿನ ಮೆರವಣಿಗೆ ನಡೆಸಿದ ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಅಖಂಡ ಭಾರತದ ಸಂಕಲ್ಪ ತೊಟ್ಟರು. ನಗರದ ಮಹದೇವಪೇಟೆಯ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಪಂಜಿನ ಮೆರವಣಿಗೆ ಆರಂಭಗೊಂಡಿತು. ಇಂದಿರಾ ಗಾಂಧಿ ವೃತ್ತ, ಅಂಚೆ ಕಚೇರಿ, ಜನರಲ್ ತಿಮ್ಮಯ್ಯ ವೃತ್ತಕ್ಕಾಗಿ ಕೊಡವ ಸಮಾಜದ ವರೆಗೆ ಮೆರವಣಿಗೆ ಸಾಗಿತು. ಕೊಡವ ಸಮಾಜ ಸಭಾಂಗಣದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪ್ರಸ್ತುತ ಭಾರತ ದೇಶ ಎದುರಿಸುತ್ತಿರುವ ಸವಾಲುಗಳ ಕುರಿತು ಪ್ರಮುಖರು ವಿವರಿಸಿದರು. ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ಜಿಲ್ಲೆಯ ಏಳು ಕಡೆಗಳಲ್ಲಿ ಅಖಂಡ ಭಾರತದ ಸಂಕಲ್ಪ ದಿನ ಕಾರ್ಯಕ್ರಮ, ಪಂಜಿನ ಮೆರವಣಿಗೆ ಹಾಗೂ ವಾಹನ ಜಾಥಾ ನಡೆಯಲಿದೆ ಎಂದು ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ರಂಜನ್ ಗೌಡ (ಬೋಜೇಗೌಡ) ತಿಳಿಸಿದರು. ಹಿಂದು ಜಾಗರಣ ವೇದಿಕೆಯ ಪ್ರಮುಖರಾದ ಸುನಿಲ್, ಚೇತನ್ ಶಾಂತಿನಿಕೇತನ, ಅಲ್ಲಮಾಡ ಶರತ್, ತಿಮ್ಮಯ್ಯ, ಅಪ್ಪು ರೈ ಮತ್ತಿತರರು ಉಪಸ್ಥಿತರಿದ್ದರು.









