
ನಾಪೋಕ್ಲು ಆ.12 NEWS DESK : ಆಚಾರ, ವಿಚಾರ, ಸಂಸ್ಕೃತಿಯನ್ನು ಮುಂದಿನ ಜನಾಂಗಕ್ಕೆ ತಿಳಿಸುವ ಜವಾಬ್ದಾರಿ ಹಿರಿಯರ ಮೇಲಿದೆ ಎಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಹೇಳಿದರು. ನಾಪೋಕ್ಲು ಕೊಡವ ಸಮಾಜದಲ್ಲಿ ಬಿಲ್ಲವ ಸಮಾಜದ ವತಿಯಿಂದ ಆಯೋಜಿಸಲಾಗಿದ್ದ ಆಟಿಡೊಂಜಿ ದಿನ -2025 ಕಾರ್ಯಕ್ರಮ ಹಾಗೂ ಬೃಹತ್ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಬಿಲ್ಲವ ಸಮಾಜದವರು ಅವರದೇ ಆದ ವಿಶಿಷ್ಟ ರೀತಿಯಲ್ಲಿ ಸಮಾಜದ ಅಭಿವೃದ್ಧಿಗೆ ಕೊಡುಗೆಯನ್ನು ನೀಡುತ್ತಾ ಬಂದಿದ್ದಾರೆ. ಎಲ್ಲರಿಗೂ ಆದರ್ಶ ಪ್ರಾಯರಾದ ಸಮಾಜ ಸುಧಾರಕ ಶ್ರೀ ನಾರಾಯಣ ಗುರು ಅವರ ಹಿಂಬಾಲಕರಾದ ಬಿಲ್ಲವ ಸಮಾಜದವರು, ಸಮಾಜದ ಎಲ್ಲಾ ಆಯಾಮಗಳಲ್ಲಿ ಮುನ್ನಲೆಗೆ ಬರಬೇಕೆಂದು ಕರೆ ನೀಡಿದರು. ಅತ್ಯಂತ ಶ್ರಮಜೀವಿಗಳು ಹಾಗೂ ಸ್ವಾಭಿಮಾನಿಗಳಾದ ಬಿಲ್ಲವ ಸಮಾಜದವರು ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತಾ ಬಂದಿದ್ದಾರೆ. ಜನಾಂಗದ ಯಾವುದೇ ಬೇಡಿಕೆ ಇದ್ದರೂ ತಾನು ಅದಕ್ಕೆ ಸ್ಪಂದಿಸುವುದಾಗಿ ಹೇಳಿದರು. ಬಿಲ್ಲವ ಸಮಾಜದ ಅಭಿವೃದ್ದಿಗಾಗಿ ಮಡಿಕೇರಿಯಲ್ಲಿ 26 ಸೆಂಟ್ಸ್ ಜಾಗವನ್ನು ಮಂಜೂರು ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಎಂದರು. ನಾರಾಯಣ ಗುರು ವಿಚಾರ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ತುಳು ನಾಡು ಸಂಸ್ಕೃತಿಯ ನಾಡಾಗಿದ್ದು, ಬಿಲ್ಲವ ಜನಾಂಗ ತುಳುನಾಡಿನ ಸಂಸ್ಕೃತಿಯ ಸಾರವನ್ನು ಮಕ್ಕಳಿಗೆ ತಿಳಿಸುವಂತಹ ಕೆಲಸವನ್ನು ಮಾಡಬೇಕಿದೆ. ನಮ್ಮ ಜನಾಂಗದ ಅಭಿವೃದ್ಧಿಗೆ ಪೂರಕವಾದ ಕೆಲಸಗಳನ್ನ ಮಾಡುವುದರ ಮೂಲಕ ರಾಜಕೀಯ ಕ್ಷೇತ್ರ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲೂ ಸ್ಥಾನ ಮಾನಗಳನ್ನು ಪಡೆದುಕೊಳ್ಳುವ ನಿಟ್ಟಿನಲ್ಲಿ ಶ್ರಮಿಸಬೇಕೆಂದರು. ಕಾರ್ಯಕ್ರಮದಲ್ಲಿ ಬಿಜೆಪಿ ಹಿಂದುಳಿದ ವರ್ಗಗಳ ಜಿಲ್ಲಾಧ್ಯಕ್ಷ ಅಪ್ಪು ರವೀಂದ್ರ ಮಾತನಾಡಿ, ಸಂಘಟನೆಯಿಂದ ಯಶಸ್ಸು ಸಾಧ್ಯ. ವಿದ್ಯೆಯಿಂದಷ್ಟೇ ಮುಂದೆ ಬರಲು ಸಾಧ್ಯ ಸಮಾಜದಲ್ಲಿ ಉತ್ತಮ ಸ್ಥಾನ ಗಳಿಸಬೇಕಾದರೆ ವಿದ್ಯೆ ಮುಖ್ಯ. ಮಕ್ಕಳಿಗೆ ಸೂಕ್ತ ವಿದ್ಯಾಭ್ಯಾಸ ನೀಡಬೇಕು. ಜನರಿಗೆ ಸಹಾಯ ಮಾಡಿ ಹೆಚ್ಚಿನ ವಿದ್ಯೆಯನ್ನುಗಳಿಸಲು ಪ್ರೋತ್ಸಾಹಿಸಬೇಕು ಎಂದರು. ಬಂಟ್ವಾಳದ ವಾಗ್ಮಿ ಶ್ರೀನಿಧಿ ಮಾತನಾಡಿ, ವರ್ಷದ ವಿವಿಧ ತಿಂಗಳುಗಳನ್ನು ವೈವಿಧ್ಯಮಯವಾಗಿ ಆಚರಿಸುವ ಬಿಲ್ಲವ ಜನಾಂಗ ತುಳು ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ಕೆಲಸವನ್ನು ಹಿರಿಯರು ಮಾಡಬೇಕಿದೆ ಎಂದರು. ಬಿಲ್ಲವ ಸಂಘದ ಅಧ್ಯಕ್ಷ ಬಿ.ಎಂ.ಪ್ರತಿಪ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಬಿಲ್ಲವ ಜನಾಂಗವನ್ನು ಒಗ್ಗೂಡಿಸುವ ಉದ್ದೇಶದಿಂದ ಸಂಘ ಸ್ಥಾಪಿಸಲಾಗಿದೆ. ರಕ್ತದಾನದ ಸಮಾಜಮುಖಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವ ಮೂಲಕ ಸಂಘ ಇತರರಿಗೆ ಮಾದರಿಯಾಗಿದೆ ಎಂದರು. ಕೊಡಗು ಜಿಲ್ಲಾ ಬಿಲ್ಲವ ಸಮಾಜದ ಅಧ್ಯಕ್ಷ ಲಿಂಗಪ್ಪ ಮಾತನಾಡಿ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ನಾಪೋಕ್ಲು ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ರಿಟರ್ನ್ ಕ್ಯಾಪ್ಟನ್ ಪೂವಪ್ಪ, ಸೋಮವಾರಪೇಟೆಯ ಬಿಲ್ಲವ ಸಮಾಜದ ಅಧ್ಯಕ್ಷ ಚಂದ್ರಹಾಸ, ವಿರಾಜಪೇಟೆ ಬಿಲ್ಲವ ಸಮಾಜದ ಅಧ್ಯಕ್ಷ ಬಿ.ಎಂ.ಗಣೇಶ್, ಕುಶಾಲನಗರ ಬಿಲ್ಲವ ಸಮಾಜದ ಅಧ್ಯಕ್ಷ ಸುದಿ, ಸುಂಟಿಕೊಪ್ಪ ಬಿಲ್ಲವ ಸಮಾಜದ ಅಧ್ಯಕ್ಷ ಮಣಿ ಮುಖೇಶ್, ಸಿದ್ದಾಪುರ ಬಿಲ್ಲವ ಸಮಾಜದ ಅಧ್ಯಕ್ಷ ಬಿ.ವಿ.ರಂಜಾನ್ ಹಾಗೂ ವಿವಿಧ ತಾಲ್ಲೂಕಿನ ಬಿಲ್ಲವ ಸಮಾಜದ ಪದಾಧಿಕಾರಿಗಳು ಹಾಗೂ ನಾಪೋಕ್ಲು ಬಿಲ್ಲವ ಸಮಾಜ ಉಪ ಅಧ್ಯಕ್ಷ ಬಿ.ಆರ್.ವಸಂತ, ಕಾರ್ಯದರ್ಶಿ ಲೋಹಿತ್ ಕೆ.ಎಸ್, ಪದಾಧಿಕಾರಿ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಇತರ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ರಾಷ್ಟ್ರಮಟ್ಟದಲ್ಲಿ ಸಾಧನೆ ಮಾಡಿದ ಯೋಗ ಪಟು ಮದೆನಾಡು ಗ್ರಾಮದ ಕೀರ್ತಿ ಕುಮಾರ್ ಮತ್ತು ರೇಣುಕಾ ದಂಪತಿಗಳ ಪುತ್ರಿ ಸಿಂಚನ ಯೋಗ ಪ್ರದರ್ಶಿಸಿ ಜನ ಮೆಚ್ಚುಗೆ ಪಾತ್ರರಾದರು. ಇವರ ಪ್ರತಿಭೆಯನ್ನು ಪ್ರಸಂಸಿ ಬಿಲ್ಲವ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಇವರ ಸಾಧನೆಯನ್ನು ಮೆಚ್ಚಿ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಇವರಿಗೆ ಶಾಸಕ ಪೊನ್ನಣ್ಣನವರು 25000 ರೂ ನೀಡುವುದರ ಮೂಲಕ ಗೌರವಿಸಿದರು. ರಕ್ತದಾನ ಶಿಬಿರದಲ್ಲಿ ಸುಮಾರು 60 ದಾನಿಗಳು ರಕ್ತದಾನ ಮಾಡಿದರು, ನಂತರ ಬಿಲ್ಲವ ಸಮಾಜದ ಮಹಾಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಕಿಶೋರ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು. ಮಹಿಳೆಯರಿಂದ ಆಟಿ ತಿಂಗಳ ವಿಶೇಷ ಖಾದ್ಯಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಬಳಿಕ ನಡೆದ ಮನೋರಂಜನ ಕಾರ್ಯಕ್ರಮ ವೀಕ್ಷಕರ ಮನೆಗೆಲ್ಲುವಲ್ಲಿ ಯಶಸ್ವಿಯಾಯಿತು. ಇದಕ್ಕೂ ಮೊದಲು ಆಟಿಕೆಳೆಂಜ ವೇಷ, ಮಹಿಳೆಯರು, ಸಾಂಪ್ರದಾಯಿಕ ಉಡುಗೆ-ತೊಡುಗೆಯೊಂದಿಗೆ ಪೂರ್ಣಕುಂಭದೊಂದಿಗೆ ಅತಿಥಿಗಳನ್ನು ಸ್ವಾಗತಿಸಲಾಯಿತು..
ವರದಿ : ದುಗ್ಗಳ ಸದಾನಂದ.









