
ಮಡಿಕೇರಿ ಆ.12 NEWS DESK : ಮಾಸಿಕ ಕನಿಷ್ಟ 10 ಸಾವಿರ ರೂ. ಗೌರವಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ ಕೊಡಗು ಜಿಲ್ಲಾ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು. ಆ.12 ರಿಂದ 14ರ ವರೆಗೆ ರಾಜ್ಯಾದ್ಯಂತ ಅಹೋರಾತ್ರಿ ಪ್ರತಿಭಟನೆಯ ಭಾಗವಾಗಿ ನಗರದ ಗಾಂಧಿ ಮೈದಾನದಿಂದ ಬಾಲಭವನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದ ಆಶಾ ಕಾರ್ಯಕರ್ತರು ಸರ್ಕಾರದ ವಿರುದ್ಧ ಘೋಷಣೆಯನ್ನು ಕೂಗಿ, ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿದರು. ಕಳೆದ ಜನವರಿಯಲ್ಲಿ ನಡೆದ ಹೋರಾಟದ ಸಂದರ್ಭ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಂಘದ ಪದಾಧಿಕಾರಿಗಳೊಂದಿಗೆ ಸಭೆ ನಡೆಸಿ 10 ಸಾವಿರ ರೂ. ಗೌರವಧನ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಏಳು ತಿಂಗಳು ಕಳೆದರೂ ಯಾವುದೇ ಆದೇಶವಾಗಿಲ್ಲ ಎಂದು ಆಶಾ ಕಾರ್ಯಕರ್ತರು ದೂರಿದರು. ಸರ್ಕಾರವು ತನ್ನ ಭರವಸೆಗಳನ್ನು ಈಡೇರಿಸದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು. ಆಶಾ ಕಾರ್ಯಕರ್ತೆಯರಿಗೆ ಪ್ರೋತ್ಸಾಹಧನ ಹೆಚ್ಚಳ ಮಾಡಬೇಕು, ಯಾವುದೇ ಆಶಾ ಕಾರ್ಯಕರ್ತೆಯರನ್ನು ಕೆಲಸದಿಂದ ತೆಗೆಯಬಾರದು, ಅವೈಜ್ಞಾನಿಕವಾಗಿರುವ ಕಾರ್ಯನಿರ್ವಹಣಾ ಮೌಲ್ಯಮಾಪನ ಕೈಬಿಡಬೇಕು, ಆಶಾ ಸುಗಮಕಾರರನ್ನು ಸೂಕ್ತ ವೇತನದೊಂದಿಗೆ ಮುಂದುವರೆಸಬೇಕು, ನಿವೃತ್ತ ಆಶಾಗಳಿಗೆ ಪಶ್ಚಿಮ ಬಂಗಾಳ ಮಾದರಿಯಲ್ಲಿ ಇಡಿಗಂಟು ನೀಡಬೇಕು, ನಗರ ಆಶಾಗಳಿಗೆ ರೂ.2 ಸಾವಿರ ಗೌರವಧನ ಹೆಚ್ಚಿಸಬೇಕೆಂದು ಒತ್ತಾಯಿಸಿದರು. ಸಂಘದ ಜಿಲ್ಲಾಧ್ಯಕ್ಷೆ ತೆಕ್ಕಡೆ ಪೂರ್ಣಿಮಾ, ಜಿಲ್ಲಾ ಕಾರ್ಯದರ್ಶಿ ಕೆ.ಎಂ.ನಾಗಮಣಿ, ಸೋಮವಾರಪೇಟೆ ತಾಲ್ಲೂಕು ಅಧ್ಯಕ್ಷೆ ಐಮುಡಿಯಂಡ ಶಾಂತಿ ಗಣೇಶ್, ಸದಸ್ಯರಾದ ಬಿ.ವಿ.ವನಿತಾ ಹಾಗೂ ಎನ್.ಶ್ರೀಮತಿ ಸೇರಿದಂತೆ ವಿವಿಧೆಡೆಯ ಆಶಾ ಕಾರ್ಯಕರ್ತರು ಪಾಲ್ಗೊಂಡಿದ್ದರು.









