
ಮಡಿಕೇರಿ NEWS DESK ಆ.12 : ಜನಪ್ರಿಯ ಪ್ರವಾಸಿತಾಣ ರಾಜಾಸೀಟು ಉದ್ಯಾನವನದಲ್ಲಿ ಗಾಜಿನ ಸೇತುವೆ ನಿರ್ಮಾಣ ಕಾನೂನಿಗೆ ವಿರುದ್ಧವಾಗಿದ್ದು, ಈ ಯೋಜನೆಯಲ್ಲಿ ಸಕ್ರಿಯರಾಗಿರುವವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಮಡಿಕೇರಿ ಹಾಗೂ ಸುಂಟಿಕೊಪ್ಪದ ಇಬ್ಬರು ರಾಜಕಾರಣಿಗಳು ಜಿಲ್ಲಾಡಳಿತದ ದಾರಿ ತಪ್ಪಿಸಿ, ರಾಜ್ಯ ತೋಟಗಾರಿಕೆ ಇಲಾಖೆಯ ಹಿರಿಯ ಅಧಿಕಾರಿಯ ಮೇಲೆ ಪ್ರಭಾವ ಬೀರಿ ಪುರಾತತ್ವ ಇಲಾಖೆ ವ್ಯಾಪ್ತಿಯ ರಾಜಾಸೀಟ್ ನಲ್ಲಿ ಗಾಜಿನ ಸೇತುವೆ ನಿರ್ಮಿಸಲು ಮತ್ತು 50 ಮೀಟರ್ ಪಕ್ಕದಲ್ಲಿ ಹೊಟೇಲ್ ನಿರ್ಮಾಣ ಮಾಡಲು ಮುಂದಾಗಿರುವುದು ನಮ್ಮ ಜನಪ್ರತಿನಿಧಿಗಳ ಆಜ್ಞೆಯ ಮೇರೆಗೆ ನಡೆಯುತ್ತಿರುವ ಅಪಾಯಕಾರಿ ಹಾಗೂ ವಿನಾಶಕಾರಿ ಕೃತ್ಯವಾಗಿದೆ ಎಂದು ಆರೋಪಿಸಿದ್ದಾರೆ. ಜನಪ್ರತಿನಿಧಿಗಳು ತಮ್ಮ ಮತದಾರರ ಘನತೆಯನ್ನು ಹಾಗೂ ನಮ್ಮ ಸಂವಿಧಾನದಲ್ಲಿ ಮೂಲಭೂತವಾಗಿ ಪ್ರತಿಪಾದಿಸಲಾದ ಜಲಸಂಪನ್ಮೂಲಗಳು, ಸಸ್ಯ, ಪ್ರಾಣಿ, ಪರಿಸರ ವಿಜ್ಞಾನ ಮತ್ತು ತಮ್ಮ ಕ್ಷೇತ್ರದ ಸ್ಥಳೀಯರ ಸಾಂಸ್ಕೃತಿಕ ಪರಂಪರೆಯನ್ನು ರಕ್ಷಿಸಬೇಕು. ವಿಶೇಷವಾಗಿ 11 ಮೂಲಭೂತ ಕರ್ತವ್ಯಗಳಲ್ಲಿ, ಈ ವಿಷಯವು ಆರ್ಟಿಕಲ್ 51 ಎ(ಎಫ್) ನ 6, 7 ಮತ್ತು 9 ರಡಿಯಲ್ಲಿ ರಕ್ಷಿಸಬೇಕು. ಆದರೆ ತಮ್ಮ ಬೇನಾಮಿ ವಿನಾಶಕಾರಿ ವಾಣಿಜ್ಯ ದುಸ್ಸಾಹಸಗಳಿಗೆ ಅವರು ನಮ್ಮ ಪ್ರದೇಶದ ಪರಿಸರ-ಸೂಕ್ಷ್ಮ ಸ್ಥಳಾಕೃತಿಯ ಅನನ್ಯ ಸಂಪನ್ಮೂಲವನ್ನು ಶೋಷಣೆ ಮಾಡುತ್ತಿದ್ದಾರೆ. ಇದು ಬೇಲಿಯೇ ಎದ್ದು ಹೊಲ ಮೇಯ್ದದಂತೆ ಆಗಿದ್ದು, ದುರಾದೃಷ್ಟಕರ ಬೆಳವಣಿಗೆಯಾಗಿದೆ. ಸರಕಾರದ ಬೆಂಬಲದಿಂದ ಇಂತಹ ವಾಣಿಜ್ಯ ದುಸ್ಸಾಹಸಗಳು ಭೂ ಪರಿವರ್ತನೆಗಳ ಮೂಲಕ ನಡೆದು ಕೊಡವಲ್ಯಾಂಡ್ ನ ಭೂಪ್ರದೇಶಕ್ಕೆ ತೀವ್ರ ಹಾನಿಯನ್ನುಂಟು ಮಾಡುತ್ತಿವೆ. ಈ ಪ್ರಕ್ರಿಯೆ ಕಪ್ಪು ಹಣದ ರೆಸಾರ್ಟ್ ಮಾಫಿಯಾಗಳು, ವ್ಯಾಪಾರ ಸಂಸ್ಥೆಗಳು, ಭ್ರಷ್ಟ ಅಧಿಕಾರಶಾಹಿ ಮತ್ತು ಸ್ವಾರ್ಥ ರಾಜಕಾರಣಿಗಳ ಸರಪಳಿಯನ್ನು ಸಕ್ರಿಯಗೊಳಿಸುತ್ತಿದೆ. ವಿಶೇಷವಾಗಿ 2023 ರಿಂದ ಭೂ ಪರಿವರ್ತನೆ ಹೆಚ್ಚಾಗಿದ್ದು, ಕಳವಳಕ್ಕೆ ಕಾರಣವಾಗಿದೆ ಎಂದು ಎನ್.ಯು.ನಾಚಪ್ಪ ತಿಳಿಸಿದ್ದಾರೆ.
ರಾಜಾಸೀಟ್ ಪುರಾತತ್ವ ಇಲಾಖೆಯ ವ್ಯಾಪ್ತಿಗೆ ಬರುತ್ತದೆ. ಪುರಾತತ್ವ ನಿಯಮವನ್ನು ಮುರಿದು ಗಾಜಿನ ಸೇತುವೆ ನಿರ್ಮಾಣಕ್ಕಾಗಿ ಟೆಂಡರ್ ಅಧಿಸೂಚನೆಯನ್ನು ಸಹ ಈ ಫಲಾನುಭವಿಗಳಿಗೆ ಅನುಕೂಲವಾಗುವಂತೆ ರಹಸ್ಯವಾಗಿ ಹೊರಡಿಸಲಾಗಿದ್ದು, ಇದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ ಎಂದು ಆರೋಪಿಸಿದ್ದಾರೆ. ರಾಜಾಸೀಟ್ ಪಶ್ಚಿಮ ಘಟ್ಟ ಪರ್ವತಗಳ ಉದ್ದನೆಯ ಸರಪಳಿಯ ಭಾಗವಾಗಿದ್ದು, ಕಡಮಕಲ್-ಪುಷ್ಪಗಿರಿ ಪರಿಸರ-ಸೂಕ್ಷ್ಮ ವನ್ಯಜೀವಿ ಶ್ರೇಣಿಗೆ ಸಂಪರ್ಕ ಹೊಂದಿದೆ. ಮತ್ತು ಕಾವೇರಿ ನದಿಯ ಉಪನದಿಗಳು ಹುಟ್ಟುವ ಅಸಂಖ್ಯಾತ ದೀರ್ಘಕಾಲಿಕ ನೀರಿನ ಬಿಂದುಗಳು ಇಲ್ಲಿವೆ. ಗಾಜಿನ ಸೇತುವೆ ಸ್ಥಾಪಿಸಲು ಇಡೀ ಪರ್ವತವನ್ನು ಕೊರೆಯಬೇಕಾಗುತ್ತದೆ, ಇದು ಪಶ್ಚಿಮಘಟ್ಟದ ಕಣಿವೆಯ ಭೌಗೋಳಿಕ ಸಮತೋಲನಕ್ಕೆ ಹಾನಿ ಉಂಟು ಮಾಡುತ್ತದೆ. 2018 ರಲ್ಲಿ, ವಾಯುವ್ಯ ಪ್ರದೇಶದ ಇದೇ ಪರ್ವತ ಸರಪಣಿ ಪ್ರದೇಶದಲ್ಲಿ ಭೂಕುಸಿತ ದುರಂತ ಸಂಭವಿಸಿದೆ. 2024 ರಲ್ಲಿ ಪಕ್ಕದ ವಯನಾಡಿನಲ್ಲಿ ಮತ್ತೊಂದು ಗಂಭೀರ ಭೂಕುಸಿತ ದುರಂತವಾಗಿದೆ. ಕೊಡಗಿನಲ್ಲಿ ಮತ್ತೆ ಅಂತಹ ದುರಂತ ಘಟನೆ ಮರುಕಳಿಸಬಾರದು. ಕೊಡವಲ್ಯಾಂಡ್ ನಲ್ಲಿ, ವಿಶೇಷವಾಗಿ ಪಶ್ಚಿಮಘಟ್ಟ ಮತ್ತು ಆನೆ ಕಾರಿಡಾರ್‌ಗಳಂತಹ ಸೂಕ್ಷ್ಮ ಪ್ರದೇಶಗಳಲ್ಲಿ ಭೂಪರಿವರ್ತನೆಯಾಗುವುದನ್ನು ಸಿಎನ್‌ಸಿ ತೀವ್ರವಾಗಿ ವಿರೋಧಿಸುತ್ತದೆ. ಭಾರತದ ಪುರಾತತ್ವ ಸರ್ವೇಕ್ಷಣಾ ಇಲಾಖೆ ಮಧ್ಯಪ್ರವೇಶಿಸಿ ರಾಜಾಸೀಟ್ ನಲ್ಲಿ ಗಾಜಿನ ಸೇತುವೆ ನಿರ್ಮಾಣವಾಗುವುದನ್ನು ತಡೆಯಬೇಕು. ಪರಿಸರ ಮತ್ತು ಪುರಾತತ್ವ ಶಾಸ್ತçದ ದೃಷ್ಟಿಕೋನಗಳಿಂದ ಪ್ರಸ್ತಾವಿತ ಗಾಜಿನ ಸೇತುವೆ ಮತ್ತು ಹೋಟೆಲ್ ಯೋಜನೆಯನ್ನು ತಕ್ಷಣ ಕೈಬಿಡಬೇಕು. ಈ ಕರಾಳ ಒಪ್ಪಂದದಲ್ಲಿ ಮೊದಲ ದಿನದಿಂದಲೂ ಭಾಗಿಯಾಗಿರುವ ಎಲ್ಲರನ್ನು ನ್ಯಾಯದ ಕಟಕಟೆಗೆ ತಂದು ಶಿಕ್ಷೆಗೆ ಗುರಿ ಪಡಿಸಬೇಕು ಎಂದು ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.






































