
ಮಡಿಕೇರಿ ಆ.13 NEWS DESK : ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಎನ್.ಎಸ್.ಎಸ್ ಘಟಕದ ವತಿಯಿಂದ ಸ್ವಯಂಸೇವಕರಿಗೆ ಸಾಮಾಜಿಕ ಸಮಸ್ಯೆ ಹಾಗೂ ಸವಾಲುಗಳ ಬಗ್ಗೆ ಚರ್ಚಾ ಕಾರ್ಯಕ್ರಮ ನಡೆಯಿತು. ಕಾಲೇಜಿನ ಸೆಮಿನಾರ್ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಡಿಕೇರಿ ಸರ್ಕಲ್ ಇನ್ಸ್ಪೆಕ್ಟರ್ ಪಿ.ಕೆ.ರಾಜು ಅವರು ಸ್ವಯಂ ಸೇವಕರಿಗೆ ದಸರಾ ಆಚರಣೆಯಲ್ಲಿ ಡಿಜೆಗಳ ಹಾವಳಿ ಯಿಂದಾಗುವ ತೊಂದರೆಗಳ ಬಗ್ಗೆ ಅರಿವು ಮೂಡಿಸಿದರು. ನಂತರ ಸ್ವಯಂಸೇವಕರಿಗೆ ಡಿಜೆ ನಡೆಸುವ ಕುರಿತು ಪರ ಹಾಗೂ ವಿರೋಧ ಚರ್ಚಾ ಕಾರ್ಯಕ್ರಮ ನಡೆಸಿದರು. ಕಾರ್ಯಕ್ರಮದಲ್ಲಿ ಸ್ವಯಂಸೇವಕರು ಉತ್ಸಾಹದಿಂದ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ಮಂಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಮೇಜರ್ ಡಾ.ಬಿ.ರಾಘವ ಅವರು, ನಮ್ಮ ಸಂಪ್ರದಾಯವಾದ ಜನಪದ ನೃತ್ಯ, ಶಾಸ್ತ್ರೀಯ ಸಂಗೀತದ ಕಡೆಗೆ ವಿದ್ಯಾರ್ಥಿಗಳು ಒಲವು ಬೆಳೆಸಿಕೊಳ್ಳಬೇಕು. ಪಾಶ್ಚಾತ್ಯ ಸಂಸ್ಕೃತಿಯನ್ನು ಅನುಕರಣೆ ಸಾಮಾಜಿಕ ಅವಘಡಗಳಿಗೆ ಕಾರಣವಾಗಬಹುದು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಎ.ಎಸ್.ಐ ರಾಮಪ್ಪ ಪೂಜಾರಿ ಹಾಗೂ ಪೊಲೀಸ್ ಇಲಾಖೆಯ ಡ್ಯಾನಿಲ್ , ಎನ್.ಎಸ್.ಎಸ್ ಯೋಜನಾಧಿಕಾರಿ ಡಾ. ಶೈಲಶ್ರೀ ಕೆ ಮತ್ತು ಅಲೋಕ್ ಬಿ.ಜೈ, ಎನ್ ಎಸ್ ಎಸ್ ವಿದ್ಯಾರ್ಥಿ ನಾಯಕರು, ಅಧ್ಯಾಪಕರು, ಅಧ್ಯಾಪಕೇತರ ವೃಂದದವರು ಹಾಜರಿದ್ದರು.









