
ನಾಪೋಕ್ಲು ಆ.14 NEWS DESK : ಮದೆನಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅವಂದೂರು ಗ್ರಾಮದ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಆವರಣದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಮಾನೋತ್ಸವ ಸಂಭ್ರಮದ ಪ್ರಯುಕ್ತವಾಗಿ ಸಂಘಟನೆ ವತಿಯಿಂದ ರಕ್ಷಾ ಬಂಧನ ಕಾರ್ಯಕ್ರಮ ನಡೆಯಿತು. ಸಂಘಟನೆಯ ಸ್ವಯಂಸೇವಕರಾದ ಧನಂಜಯ ಅಗೋಳಿಕಜೆ ಮಾತನಾಡಿ, ರಕ್ಷಾ ಬಂಧನದ ಮಹತ್ವವನ್ನು ವಿವರಿಸಿದರು. ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ ಎಸ್ ಎಸ್) ಭಾರತದ ಹಾಗೂ ವಿಶ್ವದ ಅತಿ ದೊಡ್ದ ಸ್ವಯಂಸೇವ ಸಂಘಟನೆಯಾಗಿದ್ದು, 27 ಸೆಪ್ಟೆಂಬರ್ 1925ರ ವಿಜಯ ದಶಮಿಯ ದಿನ ಮಹಾರಾಷ್ಟ್ರ ರಾಜ್ಯದ ನಾಗಪುರದಲ್ಲಿ ಡಾ. ಕೇಶವ ಬಲಿರಾಂ ಹೆಡಗೆವಾರ್ ಈ ಸಂಘಟನೆಯನ್ನು ಹುಟ್ಟುಹಾಕಿದರು. ಹಿಂದೂ ರಾಷ್ಟ್ರೀಯವಾದ ಬಲಪಂಥೀಯ ಸಂಘಟನೆಯೆಂದು ಸಾಮಾನ್ಯವಾಗಿ ಪರಿಗಣಿಸಲ್ಪಡುವ ಈ ಸಂಸ್ಥೆ ಭಾರತದ ನಾಗಪುರದಲ್ಲಿ ತನ್ನ ಮುಖ್ಯ ಕಾರ್ಯಾಲಯ ಹೊಂದಿದೆ. ಹಿಂದೂ ಸಂಘಟನೆ ಮತ್ತು ಐಕ್ಯತೆಯನ್ನು ತನ್ನ ಗುರಿಯನ್ನಾಗಿ ಹೊಂದಿರುವ ಈ ಸಂಸ್ಥೆಗೆ ಹೊಂದಿಕೊಂಡಿರುವ ಇತರ ಸಂಸ್ಥೆಗಳನ್ನು ಒಟ್ಟಾಗಿ ಸೇರಿಸಿ ಸಾಮಾನ್ಯವಾಗಿ “ಸಂಘ ಪರಿವಾರ” ಎಂದು ಕರೆಯಲಾಗುತ್ತದೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಪ್ರಚಾರಕ್ಕಾಗಿ ಸೇವೆಯನ್ನು ಮಾಡದೆ ರಾಷ್ಟ್ರದ ಹಿತಕ್ಕಾಗಿ ಶ್ರಮಿಸುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸ್ವಯಂಸೇವಕರಾದ ಶಿವರಾವ್ ಎಂ.ಎಸ್, ಇಂದ್ರಕುಮಾರ್ ಬೈನೆರವನ, ಸುರೇಶ್ ಕಾಯರ್ಮಾರ್, ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಊರೊಳನ ತೇಜಕುಮಾರ್, ಕಾಳೇರಮ್ಮನ ಅಯ್ಯಣ್ಣ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜೀರ್ಣೋದ್ಧಾರ ಸಮಿತಿಯ ಕಾರ್ಯದರ್ಶಿ ಪಟ್ಟಡ ಸುಗುಣ ಕುಮಾರ್, ಜೀರ್ಣೋದ್ಧಾರ ಸಮಿತಿಯ ಖಜಾಂಚಿ ಬೆಳ್ಯನ ಚಂದ್ರಪ್ರಕಾಶ್, ಗೋಪಾಲಕೃಷ್ಣ ಯುವ ಸಂಘದ ಅಧ್ಯಕ್ಷರಾದ ದೇವಾಯಿರ ಕೀರ್ತನ್, ಸಂಪನ್ಮೂಲ ವ್ಯಕ್ತಿ ನಂದಕುಮಾರ್ ಪಟ್ಟಡ, ವಿದ್ಯಾ ಪಟ್ಟಡ ಹಾಗೂ ಅವಂದೂರು ಗ್ರಾಮಸ್ಥರು ಭಾಗಿಯಾದರು.
ವರದಿ : ದುಗ್ಗಳ ಸದಾನಂದ.








