
ಮಡಿಕೇರಿ ಆ.14 NEWS DESK : ಕೊಡಗು ಜಿಲ್ಲಾ ಅಹಿಂದ ಒಕ್ಕೂಟ ಮತ್ತು ಸಹಮತ ವೇದಿಕೆಯ ಜಂಟಿ ಆಶ್ರಯದಲ್ಲಿ ಆ.20 ರಂದು ಮಾಜಿ ಮುಖ್ಯಮಂತ್ರಿ, ಸಾಮಾಜಿಕ ನ್ಯಾಯದ ಹರಿಕಾರ ಡಿ.ದೇವರಾಜ್ ಅರಸು ಅವರ 110ನೇ ಜನ್ಮದಿನಾಚರಣೆ ನಡೆಯಲಿದೆ ಎಂದು ಅಹಿಂದ ಒಕ್ಕೂಟ ಮತ್ತು ಸಹಮತ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಟಿ.ಪಿ.ರಮೇಶ್ ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಅಂದು ಬೆಳಿಗ್ಗೆ 11 ಗಂಟೆಗೆ ನಗರದ ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಮೈಸೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಮಾಜಿ ಸದಸ್ಯರು ಹಾಗೂ ಅರಗು ಮತ್ತು ಬಣ್ಣದ ಕಾರ್ಖಾನೆ ನಿಗಮದ ಮಾಜಿ ಅಧ್ಯಕ್ಷ ಹೆಚ್.ಎ.ವೆಂಕಟೇಶ್ ಉದ್ಘಾಟಿಸಲಿದ್ದು, ಅಧ್ಯಕ್ಷತೆಯನ್ನು ಅಹಿಂದ ಒಕ್ಕೂಟ ಮತ್ತು ಸಹಮತ ವೇದಿಕೆಯ ಸ್ಥಾಪಕಾಧ್ಯಕ್ಷರಾದ ಟಿ.ಪಿ.ರಮೇಶ್ ವಹಿಸಲಿದ್ದಾರೆ ಎಂದರು. ಸಾಹಿತಿ ಡಾ.ಬೆಸೂರು ಮೋಹನ್ ಪಾಳೇಗಾರ್ ವಿವಿಧ ಕ್ಷೇತ್ರದ ಸಾಧಕರನ್ನು ಸನ್ಮಾನಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕೊಡಗು ಅಹಿಂದ ಒಕ್ಕೂಟದ ಅಧ್ಯಕ್ಷ ಟಿ.ಎಂ.ಮುದ್ದಯ್ಯ, ಮೂರ್ನಾಡು ಕೊಡವ ಭಾಷಿಕ ಸಮುದಾಯಗಳ ಒಕ್ಕೂಟದ ಅಧ್ಯಕ್ಷ ಡಾ.ಸುಭಾಷ್ ನಾಣಯ್ಯ, ರಾಜ್ಯ ಅಹಿಂದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಕೆ.ಬಿ.ಶಾಂತಪ್ಪ, ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಘಟಕದ ಅಧ್ಯಕ್ಷ ಹೆಚ್.ಎಲ್.ದಿವಾಕರ್, ಸೋಮವಾರಪೇಟೆ ಸರಕಾರಿ ನೋಟರಿ ಮತ್ತು ವಕೀಲರಾದ ಬಿ.ಇ.ಜಯೇಂದ್ರ, ಕೊಡಗು ಜಿಲ್ಲಾ ವಕ್ಫ್ ಸಮಿತಿ ಮಾಜಿ ಅಧ್ಯಕ್ಷ ಕೆ.ಎ.ಯಾಕೂಬ್ ಹಾಗೂ ವಿವಿಧ ಸಮಾಜದ ಮುಖಂಡರು ಪಾಲ್ಗೊಳ್ಳಲಿದ್ದಾರೆ ಎಂದು ತಿಳಿಸಿದರು. ಕಾರ್ಯಕ್ರಮದಲ್ಲಿ ವೈದ್ಯರು, ಸಾಹಿತಿ ಮತ್ತು ಸಮಾಜ ಸೇವಕರಾದ ಡಾ.ಕೆ.ಬಿ.ಸೂರ್ಯಕುಮರ್, ಸೋಮವಾರಪೇಟೆ ಕಾರ್ಮಿಕ ನಾಯಕರಾದ ಡಿ.ಎಸ್.ನಿರ್ವಾಣಪ್ಪ, ಸಮಾಜ ಸೇವಕರು ಹಾಗೂ ಪ್ರಗತಿಪರ ಚಿಂತಕ ವಿ.ಪಿ.ಶಶಿಧರ್, ಮಡಿಕೇರಿ ನಗರಸಭೆ ಪೌರಸೇವಾ ಹಿರಿಯ ಸಿಬ್ಬಂದಿ ರಾಮು, ಮಾಜಿ ದಫೇದಾರ್ ಜಿ.ಎ.ಚಾಮಿ, ಪೊನ್ನಂಪೇಟೆಯ ಸಮಾಜ ಸೇವಕ ಎರ್ಮು ಹಾಜಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಂಯೋಜಕರಾದ ಲೀಲಾವತಿ, ಬುಡಕಟ್ಟು ಸಮುದಾಯದ ನಾಯಕ ಶಿವು ಅವರನ್ನು ಸನ್ಮಾನಿಸಲಾಗುವುದು ಎಂದರು. ಅಲ್ಲದೇ ಎಸ್‍ಎಸ್‍ಎಲ್ ಪರೀಕ್ಷೆಯಲ್ಲಿ ಜಿಲ್ಲೆಗೆ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಾದ ಸೋಮವಾರಪೇಟೆ ವಿಶ್ವಮಾನವ ಕುವೆಂಪು ಪ್ರೌಢಶಾಲೆಯ ಸಿ.ಎಸ್.ಆದ್ವಿ, ಕೆ.ಸಿ.ಪಂಚಮಿ, ವಿರಾಜಪೇಟೆ ಶ್ರೀ ಕಾವೇರಿ ಪ್ರೌಢಶಾಲೆಯ ಆಶ್ರಯ್ ಅಕ್ಕಮ್ಮ, ಗೋಣಿಕೊಪ್ಪ ಕಳತ್ಮಾಡು ಲಯನ್ಸ್ ಹೈಸ್ಕೂಲ್‍ನ ಎಂ.ಡಿ.ತೇಜಸ್ ಭೀಮಯ್ಯ, ಮೂರ್ನಾಡು ಕೋಡಂಬೂರು ಜ್ಞಾನಜ್ಯೋತಿ ಪ್ರೌಢಶಾಲೆಯ ಸಿ.ಎಂ.ಮಹಮ್ಮದ್ ಸಾಹಿಲ್, ಕೂಡಮಂಗಳೂರು ಯೂನಿಕ್ ಅಕಾಡೆಮಿ ಪ್ರೌಢಶಾಲೆಯ ಕೆ.ಎಂ.ಸಮೃದ್ಧಿ ಆಚಾರ್ ಅವರನ್ನು ಸನ್ಮಾನಿಸಿ ಗೌರವಿಸಲಾಗುವುದು ಎಂದು ತಿಳಿಸಿದರು. :: ದೇಶಭಕ್ತಿ ಗೀತಗಾಯನ ಸ್ಪರ್ಧೆ :: ಕಾರ್ಯಕ್ರಮದಲ್ಲಿ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೆಳಿಗ್ಗೆ 10 ಗಂಟೆಗೆ ದೇಶಭಕ್ತಿ ಗೀತಗಾಯನ ಸ್ಪರ್ಧೆ ಏರ್ಪಡಿಸಲಾಗಿದೆ ಎಂದು ಟಿ.ಪಿ.ರಮೇಶ್ ಹೇಳಿದರು.








