
ಭಾಗಮಂಡಲ NEWS DESK ಆ.15 : ಭಾಗಮಂಡಲ ಪಂಚಾಯತ್ ವತಿಯಿಂದ 79ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಬಳ್ಳಡ್ಕ ಅಪ್ಪಾಜಿ ಮತ್ತು ಅನುರವರ ಗದ್ದೆಯಲ್ಲಿ ಹೋಬಳಿ ಮಟ್ಟದ ಕೆಸರುಗದ್ದೆ ಕ್ರೀಡಾಕೂಟ ಸಂಭ್ರಮದಿಂದ ನಡೆಯಿತು. ಹಗ್ಗಜಗ್ಗಾಟ, ಶಾಲಾ ಮಕ್ಕಳಿಗೆ ಹಾಗೂ ಸಾರ್ವಜನಿಕರಿಗೆ ಓಟದ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು. ಪುರುಷರ ಹಗ್ಗಜಗ್ಗಾಟ ಶ್ರೀಕೃಷ್ಣ ಯುವಕ ಸಂಘ, ಅಯ್ಯಂಗೇರಿ ಪ್ರಥಮ ಸ್ಥಾನ , ಶ್ರೀ ಭಗವತಿ ಕಾರುಗುಂದ ದ್ವಿತೀಯ ಸ್ಥಾನ, ಮಹಿಳೆಯರ ಹಗ್ಗಜಗ್ಗಾಟ ದಲ್ಲಿ ಮಹಾವಿಷ್ಣು ಯುವತಿ ಮಂಡಳಿ ಸಿಂಗತ್ತೂರು ಪ್ರಥಮ, ಭಗವತಿ ಯುವತಿ ಮಂಡಳಿ ತಣ್ಣಿಮಾನಿ ದ್ವಿತೀಯ ಸ್ಥಾನ ಪಡೆದುಕೊಂಡವು. ಮಳೆಯ ನಡುವೆಯೂ ಕ್ರೀಡಾಭಿಮಾನಿಗಳು ಚಪ್ಪಾಳೆ, ಸಿಳ್ಳೆಯ ಮೂಲಕ ಪ್ರೋತ್ಸಾಹ ನೀಡಿ ಸಂಭ್ರಮಿಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕ ಹೊಸೂರು ಸತೀಶ್ ಜೋಯಪ್ಪ ಅವರು ಮಾತನಾಡಿ ಹೆಮ್ಮೆಯ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಆಪರೇಷನ್ ಸಿಂಧೂರದ ಮೂಲಕ ಪಾಕಿಸ್ತಾನಕ್ಕೆ ತಕ್ಕ ಉತ್ತರ ನೀಡುವ ಕೆಲಸ ಮಾಡಿದ್ದಾರೆ. ನಮ್ಮ ಸೈನಿಕರು ತಮ್ಮ ಕುಟುಂಬವನ್ನು ತೊರೆದು ದೇಶಸೇವೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ನಾವು ಇಂದು ನೆಮ್ಮದಿಯಾಗಿರಲು ಸೈನಿಕರೇ ಕಾರಣ. ಸೈನಿಕರ ತ್ಯಾಗ, ಬಲಿದಾನ, ಹೋರಾಟದ ಜೀವನವನ್ನು ಗೌರವಿಸಬೇಕು ಮತ್ತು ಈ ಬಗ್ಗೆ ಯುವ ಜನತೆಯಲ್ಲಿ ಅರಿವು ಮೂಡಿಸಬೇಕು ಎಂದರು. ಭಾಗಮಂಡಲ ಗ್ರಾ.ಪಂ ಅಧ್ಯಕ್ಷ ಕಾಳನ ರವಿ, ಅಭಿವೃದ್ಧಿ ಅಧಿಕಾರಿ ನಂದ, ಪಂಚಾಯತ್ ಸದಸ್ಯರು, ಸಿಬ್ಬಂದಿ ವರ್ಗ, ಕ್ರೀಡಾಭಿಮಾನಿಗಳು ಉಪಸ್ಥಿತರಿದ್ದರು. ನಿವೃತ್ತ ಶಿಕ್ಷಕ ಶ್ರೀಧರ್ ನಿರೂಪಿಸಿದರು.









