
ಮಡಿಕೇರಿ NEWS DESK ಆ.19 : ಕೊಡಗು ಜಿಲ್ಲೆಯ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸದ ಜೆಡಿಎಸ್ ಅಲ್ಪಸಂಖ್ಯಾತರ ಘಟಕ ಕೇವಲ ಪ್ರಚಾರಕ್ಕಾಗಿ ಕಾಂಗ್ರೆಸ್ ವಿರುದ್ಧ ಅಪಪ್ರಚಾರದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಅಸಂಘಟಿತ ಕಾರ್ಮಿಕರ ಘಟಕದ ರಾಜ್ಯ ಕಾರ್ಯದರ್ಶಿ ಎಂ.ಈ.ಅಶ್ರಫ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಬೆಳವಣಿಗೆಯಿಂದ ಹತಾಶಗೊಂಡಿರುವ ಜೆಡಿಎಸ್ ಪಕ್ಷದ ಮುಖಂಡರೆನಿಸಿಕೊಂಡಿರುವ ಕೆಲವರು ರಾಜಕೀಯ ನಿರುದ್ಯೋಗದಿಂದ ಹೊರ ಬರಲು ಇಲ್ಲಸಲ್ಲದ ಹೇಳಿಕೆಗಳನ್ನು ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಜಿಲ್ಲೆಯ ಇಬ್ಬರು ಶಾಸಕರ ಕಾರ್ಯವೈಖರಿಯನ್ನು ಮೆಚ್ಚಿ ಜೆಡಿಎಸ್ ನ ಅನೇಕರು ಪಕ್ಷ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ ಮತ್ತು ಶಾಸಕರುಗಳಿಗೆ ಬೆಂಬಲ ಸೂಚಿಸುತ್ತಿದ್ದಾರೆ. ಮತ್ತಷ್ಟು ಮಂದಿ ಕಾಂಗ್ರೆಸ್ ಗೆ ಬರಲು ಕಾಯುತ್ತಿದ್ದಾರೆ. ಇದನ್ನು ಸಹಿಸದ ಜೆಡಿಎಸ್ ನ ಅಲ್ಪಸಂಖ್ಯಾತರ ಘಟಕ ಜನರ ಹಾದಿ ತಪ್ಪಿಸುವ ಹೇಳಿಕೆಗಳನ್ನು ನೀಡುತ್ತಿದೆ. ಅಲ್ಪಸಂಖ್ಯಾತರ ಹಿತ ಕಾಯುವಲ್ಲಿ ಕಾಂಗ್ರೆಸ್ ಪಕ್ಷ ಮುಂಚೂಣಿಯಲ್ಲಿದೆ. ಜಿಲ್ಲೆಯ ಇಬ್ಬರು ಶಾಸಕರು ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಅಲ್ಪಸಂಖ್ಯಾತರಿಗೆ ಪಕ್ಷದಲ್ಲಿ, ನಿಗಮ ಮಂಡಳಿಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಸೂಕ್ತ ಸ್ಥಾನಮಾನಗಳನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಕೊಡಗಿನಲ್ಲಿ ಸಂಘಟನೆಯೇ ಇಲ್ಲದೆ ಮೂಲೆಗುಂಪಾಗಿರುವ ಜೆಡಿಎಸ್ ಪಕ್ಷದ ಅಲ್ಪಸಂಖ್ಯಾತರ ಘಟಕ ಖಾಲಿ ಮನೆಯಂತ್ತಾಗಿದೆ. ಈ ಘಟಕದ ಜಿಲ್ಲಾಧ್ಯಕ್ಷರಿಗೆ ಕಾಂಗ್ರೆಸ್ ಮತ್ತು ಅಲ್ಪಸಂಖ್ಯಾತರ ವೈಭವ ನೋಡಿ ನೋವು ಉಂಟಾಗಿರಬಹುದು ಎಂದು ಎಂ.ಈ.ಅಶ್ರಫ್ ಲೇವಡಿ ಮಾಡಿದ್ದಾರೆ. ವಕ್ಫ್ ಬೋರ್ಡ್ ವಿಚಾರದಲ್ಲಿ ರೆಸಾರ್ಟ್ ರಾಜಕೀಯ ಎಲ್ಲೂ ನಡೆದಿಲ್ಲ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದೊಡ್ಡದಿರುವುದರಿಂದ ಒಮ್ಮತದ ಅಭಿಪ್ರಾಯಕ್ಕೆ ಬರಲು ಅಲ್ಪಸಂಖ್ಯಾತರ ನಾಯಕರು ಹಾಗೂ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಅಂತಿಮವಾಗಿ ಇಬ್ಬರ ಹೆಸರನ್ನು ಇಬ್ಬರು ಶಾಸಕರು ಹಾಗೂ ಕಾಂಗ್ರೆಸ್ ಜಿಲ್ಲಾಧ್ಯಕ್ಷರಿಗೆ ನೀಡಲಾಗಿದೆ. ಸಧ್ಯದಲ್ಲೇ ಅಧ್ಯಕ್ಷರ ಘೋಷಣೆಯಾಗಲಿದ್ದು, ಈ ವಿಚಾರದಲ್ಲಿ ಯಾವುದೇ ಗೊಂದಲಗಳಿಲ್ಲ. ವಿನಾಕಾರಣ ಕಪೋಲಕಲ್ಪಿತ ಹೇಳಿಕೆಗಳನ್ನು ನೀಡುತ್ತಿರುವ ಜೆಡಿಎಸ್ ಅಲ್ಪಸಂಖ್ಯಾತರ ಘಟಕದ ಜಿಲ್ಲಾಧ್ಯಕ್ಷರು ರಾಜಕೀಯ ಬಲ ಕಳೆದುಕೊಂಡಿರುವ ಜೆಡಿಎಸ್ ನ ಯೋಗಕ್ಷೇಮದ ಬಗ್ಗೆ ಮೊದಲು ಆಸಕ್ತಿ ತೋರಲಿ ಎಂದು ಎಂ.ಈ.ಅಶ್ರಫ್ ತಿರುಗೇಟು ನೀಡಿದ್ದಾರೆ.









