
ಸುಂಟಿಕೊಪ್ಪ ಆ.21 NEWS DESK : ಮಾದಾಪುರ ಕೃಷಿ ಪತ್ತಿನ ಸಹಕಾರ ಸಂಘ, ಸ್ಮೀತಾ ಐಕೇರ್ ಹಾಗೂ ಯಶಸ್ವಿನ ಸೇವಾ ಟ್ರಸ್ಟ್ ವತಿಯಿಂದ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ನೇತ್ರ ಶಿಬಿರವನ್ನು ಮಡಿಕೇರಿ ಸ್ಮೀತಾ ಐಕೇರ್‍ನ ವೈಧ್ಯರಾದ ಡಾ.ಪ್ರಶಾಂತ್ ಉದ್ಘಾಟಿಸಿದರು. ಯಶಸ್ವಿನ ಸೇವಾಟ್ರಸ್ಟ್ ಯೋಜನಾಧಿಕಾರಿ ಚೇತನ್ ಮಾತನಾಡಿ, ಈ ಭಾಗದ ಸಾರ್ವಜನಿಕರಿಗಾಗಿ ಉಚಿತ ಕಣ್ಣಿನ ತಪಾಸಣೆಯನ್ನು ಆಯೋಜಿಸಿದ್ದು ಅರ್ಹರಿಗೆ ಉಚಿತ ಕನ್ನಡಕವನ್ನು ವಿತರಿಸಲಾಗುವುದು. ಅಲ್ಲದೆ ಶಸ್ತ್ರಚಿಕಿತ್ಸೆ ಅವಶ್ಯಕತೆ ಇರುವವರಿಗೆ ಈ ಸಂಘದ ಯಶಸ್ವಿನಿ ಆರೋಗ್ಯ ಕಾರ್ಡು ಹೊಂದಿದಲ್ಲಿ ಉಚಿತ ಶಸ್ತ್ರಚಿಕಿತ್ಸೆ ಮಾಡಿಕೊಡಲಾಗುವುದು ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾ.ಕೃ.ಪ.ಸ.ಸಂ ಅಧ್ಯಕ್ಷ ನಾಪ್ಪಂಡ ಉಮೇಶ್ ಉತ್ತಪ್ಪ, ಮಾದಾಪುರ ವ್ಯಾಪ್ತಿಯ ಸಾರ್ವಜನಿಕರಿಗೆ ಈ ಶಿಬಿರವನ್ನು ಆಯೋಜಿಸಿದ್ದು, ಅವಶ್ಯವಿದ್ದಲ್ಲಿ ಓದುವ ಕನ್ನಡಕವನ್ನು ಸಂಘದ ವತಿಯಿಂದ ನೀಡಲಾಗುವುದೆಂದರು. ಈ ಸಂದರ್ಭ ಸಂಘದ ಯೋಜನಾಧಿಕಾರಿ ಕಾವೇರಪ್ಪ, ನಿರ್ದೇಶಕರುಗಳಾದ ಸಿ.ಎ.ತಮ್ಮಯ್ಯ, ಕೆ.ಎ.ಲತೀಫ್, ಸೋನಾ, ಗಿರೀಶ್, ತಿಲಕ್‍ಕುಮಾರ್ ಇನ್ನಿತರರು ಉಪಸ್ಥಿತರಿದ್ದರು. 60ಕ್ಕೂ ಮಿಕ್ಕಿ ಮಂದಿ ಈ ಶಿಬಿರದ ಸದುಪಯೋಗವನ್ನು ಪಡೆದುಕೊಂಡರು.








