
*ಹಿಂದೂ, ಮುಸ್ಲಿಂ, ಕ್ರೈಸ್ತರು ಎನ್ನುವ ಬೇಧಭಾವವಿಲ್ಲದೆ ಎಲ್ಲರೂ ಒಗ್ಗೂಡಿ ಸೂರ್ಯಕಾಂತಿ ಎಲೆಯಲ್ಲಿ ಮೂಡಿದ ಗಣಪತಿ ಮೂರ್ತಿಯನ್ನು ಪ್ರತಿಷ್ಟಾಪನೆ ಮಾಡಿದ ಪುಟಾಣಿನಗದ ಯುವಕರು* ಮಡಿಕೇರಿ NEWS DESK ಆ.27 : ಗಣೇಶೋತ್ಸವದ ಸಡಗರ ನಾಡಿನಲ್ಲಿ ಮನೆ ಮಾಡಿದೆ. ವಿಘ್ನ ನಿವಾರಕ ವಿನಾಯಕನ ಸ್ಮರಣೆ ಜೋರಾಗುತ್ತಿದ್ದು, ಮಡಿಕೇರಿ ನಗರದಲ್ಲೂ ಹಬ್ಬದ ವಾತಾವರಣವಿದೆ. ಉತ್ಸವದ ವಿಶೇಷ ಆಕರ್ಷಣೆಯಾದ ಗಣೇಶ ಮೂರ್ತಿಗಳ ಪ್ರತಿಷ್ಠಾಪನೆ ವಿವಿಧ ಬಡಾವಣೆಗಳಲ್ಲಿ ಮಾಡಲಾಗಿದೆ. ನಗರದ ಪುಟಾಣಿನಗರ ಉದ್ಭವ ವಿನಾಯಕ ಸೇವಾ ಸಮಿತಿಯ ಸದಸ್ಯರು 32ನೇ ವರ್ಷದ ಅದ್ದೂರಿ ಗಣೇಶೋತ್ಸವವನ್ನು ಒಗ್ಗಟ್ಟಿನಿಂದ ಆಚರಿಸುತ್ತಾ ಸಂಭ್ರಮಿಸುತ್ತಿದ್ದಾರೆ. ಮಡಿಕೇರಿಯ ಕಲಾವಿದ ರವಿ ಅವರ ಕೈಯಲ್ಲಿ ಅರಳಿದ ಸೂರ್ಯಕಾಂತಿ ಎಲೆಯಲ್ಲಿ ಮೂಡಿದ ಗಣಪತಿ ಮೂರ್ತಿಯನ್ನು ಪ್ರತಿಷ್ಠಾಪಿಸಿದರು. ಮುಂದಿನ 9 ದಿನಗಳ ಕಾಲ ಬಡಾವಣೆಯ ನಿವಾಸಿಗಳ ಮನೆ ಮನೆಯಿಂದಲ್ಲೂ ಗಣಪತಿ ಮೂರ್ತಿಗೆ ಸಂಕಲ್ಪ ಪೂಜೆಗಳು ನಡೆಯಲಿದೆ. ಕೆಲವು ವರ್ಷಗಳ ಹಿಂದೆ ಕೇವಲ ಬೆರಳೆಣಿಕೆಯಷ್ಟು ಸದಸ್ಯರನ್ನು ಹೊಂದಿದ್ದ ಉದ್ಭವ ವಿನಾಯ ಸೇವಾ ಸಮಿತಿಯ ಸದಸ್ಯರು ಪೆಂಡಲ್ ನಲ್ಲಿ ವಿನಾಯಕನ ಅರಾದನೆ ಮಾಡುತ್ತಿದ್ದರು. ಅಂದು ಪೂಜೆ ನೆರವೇರಿಸುತ್ತಿದ್ದ ಸ್ಥಳದಲ್ಲಿ ಇಂದು ಸ್ಥಳೀಯ ನಿವಾಸಿಗಳ ತನು, ಮನ, ಧನ ಸಹಾಯದಿಂದ ಸಮಿತಿ ಸ್ವಂತ ಕಟ್ಟಡ ಹೊಂದಿದೆ. ಗಣಪತಿ ಮೂರ್ತಿ ಪೂಜೆಗಾಗಿ ಒಂದು ಸುಂದರವಾದ ಕಟ್ಟಡವೊಂದು ನಿರ್ಮಾಣವಾಗಿದೆ. ದೇವರ ಪೂಜಾ ಕೈಂಕರ್ಯಗಳು, ಪ್ರಸಾದ ಸೇವೆಗಳು ಒಂದೇ ಕಡೆ ನಡೆಯುತ್ತಿದೆ. ಹಿಂದೂ, ಮುಸ್ಲಿಂ, ಕ್ರೈಸ್ತ ಎನ್ನುವ ಬೇಧವನ್ನು ಮರೆತ ಇಲ್ಲಿನ ಯುವ ಸಮೂಹ ಗಣಪತಿಯ ಅರಾಧಾನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿವಿಧತೆಯಲ್ಲಿ ಏಕತೆಯನ್ನು ಸಾರುವಲ್ಲಿ ಯಶಸ್ವಿಯಾಗಿದ್ದಾರೆ.










