

ನಾಪೋಕ್ಲು ಆ.28 NEWS DESK : ಕೊಡಗು ಜಿಲ್ಲೆ ತಲತಲಾಂತರ ತನ್ನದೇ ಆದ ವಿಶೇಷ ಆಚಾರ, ವಿಚಾರ, ಸಂಸ್ಕೃತಿ, ಪದ್ಧತಿ ಪರಂಪರೆಯನ್ನು ಹೊಂದಿದೆ. ಇವುಗಳಲ್ಲಿ ಸಾಮೂಹಿಕವಾಗಿ ಭಾಗವಹಿಸಿ ಆಚರಿಸಲ್ಪಡುವ ಕಾವೇರಿ ಸಂಕ್ರಮಣ, ಹುತ್ತರಿ(ಪುತ್ತರಿ) ಪ್ರಮುಖ ಹಬ್ಬಗಳಲ್ಲಿ ಕೈಲ್ ಪೊಳ್ದ್ ಒಂದು. ಇದನ್ನು ನಾಲ್ಕು ನಾಡು ವ್ಯಾಪ್ತಿಯಲ್ಲಿ ಆ.28 ರಂದು ಈ ಹಬ್ಬವನ್ನು ಆಚರಿಸುವುದು ಸಾಂಪ್ರದಾಯಿಕವಾಗಿ ಬಂದಿದೆ. ಕೈಲ್ ಎಂದರೆ ಆಯುಧ. ಪೊಳ್ದ್ ಎಂದರೆ ಪೂಜೆ ಎಂದರ್ಥ. ಅಂತೆಯೇ “ಕೈಲ್ ಪೊಳ್ದ್ ” ಎಂದರೆ ಆಯಧ ಪೂಜೆ. ಹಿಂದೆ ಪ್ರಾಣಿಗಳ ಬೇಟೆಗೆ ಕೋವಿ ಕತ್ತಿ ವಿವಿಧ ಆಯುಧಗಳನ್ನು ಬಳಸುತ್ತಿದ್ದರು. ಆದರೆ ವ್ಯವಸಾಯದ ಸಂದರ್ಭದಲ್ಲಿ ಅಂದರೆ ಸಿಂಹ ಮಾಸದಲ್ಲಿ ಈ ಆಯುಧಗಳನ್ನು ಉಪಯೋಗಿಸುವುದಿಲ್ಲ. ಕೃಷಿ ಕಾರ್ಯ ಮುಗಿದ ನಂತರ ಕೃಷಿ ಪರಿಕರಗಳಿಗೆ ಹಾಗೂ ಆಯುಧಗಳಿಗೆ ಪೂಜೆ. ಈ ಕೆಲವು ಆಯುಧಗಳನ್ನು ದೇವರ ಕೋಣೆ (ಕನ್ನಿಕೋಂಬರೆ) ಯಿಂದ ಹೊರ ತೆಗೆದು ಸಾಂಪ್ರದಾಯದೊಂದಿಗೆ ಶ್ರದ್ಧಾ ಭಕ್ತಿಯಿಂದ ಪೂಜಿಸುತ್ತಾರೆ. ಕೋವಿಯನ್ನು ಪೂಜಿಸಲು ಈ ಸಂದರ್ಭ ವಿಶೇಷವಾಗಿ ಕಾಡಿನಲ್ಲಿ ದೊರಕುವ ತೋಕುಪೂವನ್ನು ಬಳಸುತ್ತಾರೆ. ಕಾಡುಗಳಲ್ಲಿ ಬೆಳೆಯುವ ಸುಂದರ ಹೂ ಇದು. ಕೈಲ್ ಪೊಳ್ದ್ ಹಬ್ಬದ ನಂತರ ಕತ್ತಿ ಕೋವಿಗಳು ಬಳಕೆಯಾದರೆ ಈ ಹಬ್ಬದ ನಂತರ ಗದ್ದೆ ವ್ಯವಸಾಯದ ನೇಗಿಲು ನೊಗ ಇತ್ಯಾದಿ ವ್ಯವಸಾಯ ಉಪಕರಣಗಳಿಗೆ ವಿರಾಮ. ಅಂತೆಯೇ ಈ ಎಲ್ಲಾ ಉಪಕರಣಗಳನ್ನು ತೊಳೆದು ಪೂಜೆ ಸಲ್ಲಿಸಲಾಗುತ್ತದೆ. ಉಳುಮೆ ಮಾಡಿದ ಎತ್ತುಗಳ ಮೈ ತೊಳೆದು ಅವುಗಳಿಗೆ ಕುಂಕುಮ ಗಂಧ ಹಚ್ಚಿ ಅಲಂಕರಿಸಲಾಗುತ್ತದೆ. ಕಡಂಬಿಟ್ಟು ಹಾಗೂ ಮಾಂಸದ ಊಟ ಕೈಲ್ ಮುಹೂರ್ತ ಹಬ್ಬದ ವಿಶೇಷ. ಬಳಿಕ ಎಲ್ಲರೂ ಊರಿನ ಪಕ್ಕದ ಮೈದಾನದಲ್ಲಿ ಸೇರುತ್ತಾರೆ. ಅಲ್ಲಿ ಕೋವಿಯ ಮೂಲಕ ಗುಂಡು ಹಾರಿಸಿ ವಿವಿಧ ಕ್ರೀಡಾಕೂಟಗಳೊಂದಿಗೆ ಹಬ್ಬದ ಆಚರಣೆ. ಎಲ್ಲರಿಗೂ ಅಲ್ಲಿ ಆಟೋಟ ಸ್ಪರ್ಧೆಗಳು ನಡೆಯುತ್ತವೆ. ಮರದ ತುದಿಗೆ ತೆಂಗಿನಕಾಯಿ ಕಟ್ಟಿ ಅದಕ್ಕೆ ಗುಂಡು ಹೊಡೆಯುವುದು ಅವುಗಳಲ್ಲಿ ಒಂದು. ಆದರೆ ಕೊಡಗಿನಲ್ಲಿ ಇತ್ತೀಚೆಗೆ ಹಲವಾರು ಕಾರಣಗಳಿಂದಾಗಿ ಭೂಮಿಯನ್ನು ನಡೆಯುವವರ ಸಂಖ್ಯೆ ಕಡಿಮೆಯಾಗಿದ್ದು ಹಬ್ಬವು ಹಿಂದಿನ ಆಚಾರ ವಿಚಾರ ಸಂಪ್ರದಾಯದ ವೈಭವವನ್ನು ಕಳೆದುಕೊಳ್ಳುತ್ತಿದೆ. .
ವರದಿ : ದುಗ್ಗಳ ಸದಾನಂದ.









