
ನಾಪೋಕ್ಲು ಆ.29 NEWS DESK : ಶ್ರೀ ಗೌರಿ ಗಣೇಶೋತ್ಸವದ ಅಂಗವಾಗಿ ನಾಪೋಕ್ಲುವಿನ ವಿವಿಧ ಗಣೇಶ ಸೇವಾ ಸಮಿತಿಗಳ ವತಿಯಿಂದ ಗೌರಿ ಗಣೇಶ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಯಿತು. ಶ್ರೀ ಗೌರಿ ಗಣೇಶೋತ್ಸವವನ್ನು ಸಂಭ್ರಮದಿಂದ ಆಚರಿಸಲು 4 ಗಣೇಶ ಸೇವಾ ಸಮಿತಿಗಳ ವತಿಯಿಂದ ಸಂತೆ ಮೈದಾನದಿಂದ ಗೌರಿ ಗಣೇಶ ಮೂರ್ತಿಗಳನ್ನು ಅಲಂಕೃತ ವಾಹನಗಳಲ್ಲಿಸಿ ವಾದ್ಯ ಮೇಳಗಳೊಂದಿಗೆ ಕೊಂಡೊಯ್ಯಲಾಯಿತು. ಮಳೆಯ ನಡುವೆಯೇ ಪಟ್ಟಣದ ಮುಖ್ಯ ರಸ್ತೆಯಲ್ಲಿ ಭವ್ಯ ಮೆರವಣಿಗೆಯಲ್ಲಿ ಸಾಗಿ ನಂತರ ವಿವಿಧ ಕಡೆಯ ದೇವಾಲಯ ಆವರಣ ಹಾಗೂ ಪೆಂಡಾಳುಗಳಲ್ಲಿ ಪ್ರತಿಷ್ಠಾಪನೆ ಮಾಡಲಾಯಿತು. ಗಣೇಶೋತ್ಸವ ಸಮಿತಿಗಳ ಪ್ರಮುಖ ಕಲಿಯಂಡ ವಿಠಲ ಅವರು ಸಂತೆ ಮೈದಾನದಲ್ಲಿ ಗಣೇಶ ಮೂರ್ತಿಗಳ ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿ, ಎಲ್ಲರೂ ಸೇರಿ ವಿಘ್ನೇಶನನ್ನು ಭಕ್ತಿ ಭಾವದಿಂದ ಪೂಜಿಸಿ ವಿಸರ್ಜಿಸುವುದು ಸಂಸ್ಕೃತಿ ನಮ್ಮದಾಗಿದ್ದು ಇದಕ್ಕೆ ಎಲ್ಲರೂ ಭಾಗವಹಿಸಿ ಸಹಕಾರ ನೀಡಬೇಕು ಎಂದರು. ಆ.31 ರಂದು ಎಲ್ಲ ಗಣಪತಿ ಸೇವಾ ಸಮಿತಿಗಳು ಒಟ್ಟು ಸೇರಿ ವಿವಿಧ ಅಲಂಕೃತ ಮಂಟಪ, ಸಂಸ್ಕೃತಿಕ ಕಾರ್ಯಕ್ರಮ, ವಾದ್ಯಗೋಷ್ಠಿಗಳೊಂದಿಗೆ ಅದ್ದೂರಿ ಮೆರವಣಿಗೆಯೊಂದಿಗೆ ಪವಿತ್ರ ಕಾವೇರಿಯಲ್ಲಿ ವಿಸರ್ಜಿಸಲಾಗುವುದು ಎಂದರು. ಶಿವಚಳಿಯಂಡ ಜಗದೀಶ್ ಇಡುಗಾಯಿ ಹೊಡೆಯುವುದರ ಮೂಲಕ ಮೆರವಣಿಗೆ ಪ್ರಾರಂಭಗೊಂಡಿತು. ಈ ಸಂದರ್ಭ ಭಗವದ್ಭಕ್ತರು ಬಸ್ಸು ನಿಲ್ದಾಣದ ಸಮೀಪ ನೂರಾರು ತೆಂಗಿನಕಾಯಿಗಳ ಈಡುಗಾಯಿ ಒಡೆದು ತಮ್ಮ ಇಷ್ಟಾರ್ಥ ಸೇವೆಯನ್ನು ಪೂರೈಸಿಕೊಂಡರು. ಇಲ್ಲಿನ ಇಂದಿರಾ ನಗರದ ವಿವೇಕಾನಂದ ಸಂಘದ ಗಣೇಶ ಉತ್ಸವ ಸೇವಾ ಸಮಿತಿ ವತಿಯಿಂದ 20ನೇ ವರ್ಷ ಆಚರ್ಸಲ್ಪಡುತ್ತಿರುವ ಗೌರಿ ಗಣೇಶ ಮೂರ್ತಿಗಳನ್ನು ಇಂದಿರಾನಗರದಲ್ಲಿ ಶ್ರೀರಾಮ ಟ್ರಸ್ಟ್ ಗಣೇಶೋತ್ಸವ ಸಮಿತಿ ವತಿಯಿಂದ 46ನೇ ವರ್ಷ ಆಚರ್ಸಲ್ಪಡುತ್ತಿರುವ ಗೌರಿ ಗಣೇಶ ಮೂರ್ತಿಗಳನ್ನು ಶ್ರೀ ಗುರುಪೊನ್ನಪ್ಪ ಸಭಾಂಗಣದಲ್ಲಿ, ಶ್ರೀ ಪೊನ್ನು ಮುತ್ತಪ್ಪ ವಿನಾಯಕ ಸೇವಾ ಸಮಿತಿ ವತಿಯಿಂದ 16 ನೇ ವರ್ಷದ ಆಚರ್ಸಲ್ಪಡುತ್ತಿರುವ ಗೌರಿ ಗಣೇಶ ಮೂರ್ತಿಗಳನ್ನು ಹಳೆ ತಾಲೂಕು ಶ್ರೀ ಪೊನ್ನು ಮುತ್ತಪ್ಪ ದೇವಾಲಯದಲ್ಲಿ ನಾಪೋಕ್ಲು ನಾಡು ಗೌರಿ ಗಣೇಶ ಸಮಿತಿ ವತಿಯಿಂದ ಹಳೆ ತಾಲೂಕಿನ ಶ್ರೀ ಭಗವತಿ ದೇವಾಲಯದ ಸಭಾಭವನದಲ್ಲಿ 32ನೇ ವರ್ಷ ಆಚರಿಸಲ್ಪಡುತ್ತಿರುವ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಕಕ್ಕುಂದ ಕಾಡಿನ ಗಣೇಶೋತ್ಸವ ಸೇವಾ ಸಮಿತಿ ವತಿಯಿಂದ ವೆಂಕಟೇಶ್ವರ ದೇವಾಲಯದಲ್ಲಿ 20ನೇ ವರ್ಷ ಆಚರಿಸಲ್ಪಡುತ್ತಿರುವ ಗೌರಿ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು. ಬಳಿಕ ಎಲ್ಲಾ ಸಮಿತಿಗಳ ವತಿಯಿಂದ ವಿಶೇಷ ಪೂಜೆ,ತೀರ್ಥ ಪ್ರಸಾದ ವಿತರಣೆ ಜರುಗಿ ನಂತರ ಭಕ್ತಾದಿಗಳಿಗೆ ಅನ್ನದಾನ ನೆರವೇರಿಸಲಾಯಿತು. ಈ ಸಂದರ್ಭ ಎಲ್ಲಾ ಗೌರಿ ಗಣೇಶೋತ್ಸವ ಸಮಿತಿಗಳ ಪದಾಧಿಕಾರಿಗಳು, ಸದಸ್ಯರು, ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ಪೊಲೀಸ್ ಠಾಣಾಧಿಕಾರಿ ಪಿ.ಜಿ.ರಾಘವೇಂದ್ರ ಹಾಗೂ ಸಿಬ್ಬಂದಿಗಳು ಸೂಕ್ತ ಕಾನೂನು ಕ್ರಮ ಕೈಗೊಂಡಿದ್ದರು. ಪ್ರತಿದಿನ ವಿವಿಧ ಸೇವಾ ಸಮಿತಿಗಳ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳು ಜರುಗಲಿದೆ. ಆ.31 ರಂದು ಎಲ್ಲ ಗಣಪತಿ ಸೇವಾ ಸಮಿತಿಗಳು ಒಟ್ಟು ಸೇರಿ ವಿವಿಧ ಅಲಂಕೃತ ಮಂಟಪ, ಸಂಸ್ಕೃತಿಕ ಕಾರ್ಯಕ್ರಮ, ವಾದ್ಯಗೋಷ್ಠಿಗಳೊಂದಿಗೆ ಅದ್ದೂರಿ ಮೆರವಣಿಗೆಯೊಂದಿಗೆ ಪವಿತ್ರ ಕಾವೇರಿಯಲ್ಲಿ ವಿಸರ್ಜಿಸಲಾಗುವುದು
ವರದಿ : ದುಗ್ಗಳ ಸದಾನಂದ.








