
ಮಡಿಕೇರಿ ಸೆ.20 NEWS DESK : ಮಡಿಕೇರಿ ನಗರಸಭೆಯಲ್ಲಿ ಬಿಜೆಪಿ ಆಡಳಿತದ ವೇಗವನ್ನು ಕಂಡು ಗಲಿಬಿಲಿಗೊಂಡಿರುವ ಕಾಂಗ್ರೆಸ್ಸಿಗರು ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ. ನಗರದ ರಸ್ತೆಗಳ ಗುಂಡಿಮುಚ್ಚುವ ಕಾರ್ಯ ಟೆಂಡರ್ ಪ್ರಕ್ರಿಯೆಯ ಮೂಲಕವೇ ನಡೆಯಬೇಕು ಎಂಬ ಉದ್ದೇಶದಿಂದ ನಿಯಮ ಬಾಹಿರವಾಗಿ ನಡೆಯುತ್ತಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ನಗರಸಭಾ ಉಪಾಧ್ಯಕ್ಷ ಮಹೇಶ್ ಜೈನಿ ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ನಗರಸಭೆಯ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರಿಗೆ ಮಾಹಿತಿ ನೀಡದೆ ಮತ್ತು ಟೆಂಡರ್ ಪ್ರಕ್ರಿಯೆ ನಡೆಸದೆ ಎನ್‍ಡಿಆರ್‍ಎಫ್ ಹಣದಲ್ಲಿ ಏಕಾಏಕಿ ಗುಂಡಿಮುಚ್ಚುವ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಇದನ್ನು ಪ್ರಶ್ನಿಸಿದ ನಮ್ಮ ವಿರುದ್ಧ ಕಾಂಗ್ರೆಸ್ ವಕ್ತಾರರು ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಎನ್ನುವ ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಸುಮಾರು 43 ಲಕ್ಷ ರೂ.ಗಳ ಕಾಮಗಾರಿಯನ್ನು ಒಬ್ಬನೇ ಗುತ್ತಿಗೆದಾರ ನಿರ್ವಹಿಸುತ್ತಿದ್ದಾರೆ. ಇದನ್ನು ಗಮನಿಸಿದ ನಗರದ ಇತರ ಗುತ್ತಿಗೆದಾರರು ಆಕ್ಷೇಪ ವ್ಯಕ್ತಪಡಿಸಿ ದೂರು ನೀಡಿದ ಹಿನ್ನೆಲೆ ಅಧ್ಯಕ್ಷರು ಟೆಂಡರ್ ನಡೆಸದೆ ನಡೆಯುತ್ತಿರುವ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. ಎಲ್ಲಾ ಕಾಮಗಾರಿ ಪಾರದರ್ಶಕವಾಗಿರಲಿ ಎನ್ನುವುದು ನಮ್ಮ ಉದ್ದೇಶವಾಗಿದೆ. ಆದರೆ ಕಾಂಗ್ರೆಸ್ಸಿಗರು ಜನರಲ್ಲಿ ತಪ್ಪು ಅಭಿಪ್ರಾಯ ಮೂಡಿಸುತ್ತಿದ್ದಾರೆ ಎಂದರು. ನಿಯಮ ಬಾಹಿರ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧ್ಯಕ್ಷರು ತಿಳಿಸಿದ್ದರೂ ಯಾವುದೋ ಪ್ರಭಾವಕ್ಕೆ ಒಳಗಾಗಿರುವ ಗುತ್ತಿಗೆದಾರರು ಕಾಮಗಾರಿಯನ್ನು ಮುಂದುವರೆಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ದಸರಾದ ಹಿನ್ನೆಲೆಯಲ್ಲಿ ನಗರಸಭೆಯ ನಿಧಿಯಿಂದ ನಗರದ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ನಡೆಯುತ್ತಿದೆ. ಅಲ್ಲದೆ ಎಲ್ಲಾ ಅಭಿವೃದ್ಧಿ ಕಾರ್ಯಗಳು ಸುಸೂತ್ರವಾಗಿ ಮುಂದುವರೆದಿದೆ. ಕಂದಾಯ ಸಂಗ್ರಹದಲ್ಲಿ ಮಡಿಕೇರಿ ನಗರಸಭೆ 2ನೇ ಸ್ಥಾನದಲ್ಲಿದೆ. ಯಾವುದೇ ಕಡತಗಳು ಬಾಕಿ ಉಳಿಯದಂತೆ ನೋಡಿಕೊಳ್ಳಲಾಗುತ್ತಿದೆ. ಸಾರ್ವಜನಿಕರಿಗೆ ತೊಂದರೆಯಾದ ರೀತಿಯಲ್ಲಿ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲಾಗುತ್ತಿದೆ. ಇದನ್ನೆಲ್ಲ ಸಹಿಸದ ಕಾಂಗ್ರೆಸ್ಸಿಗರು ಗಾಳಿಯಲ್ಲಿ ಗುಂಡು ಹಾರಿಸುವ ಪ್ರಯತ್ನ ಮಾಡಿದ್ದಾರೆ ಎಂದು ಮಹೇಶ್ ಜೈನಿ ತಿಳಿಸಿದರು. ನಗರಸಭೆಯಲ್ಲಿ ಕೇವಲ ಒಂದು ಸ್ಥಾನ ಗೆದ್ದಿರುವ ಕಾಂಗ್ರೆಸ್ ಮುಂದಿನ ಚುನಾವಣೆಯಲ್ಲಿ ಎರಡು ಸ್ಥಾನಗಳನ್ನು ಗೆಲ್ಲುವುದಕಷ್ಟೇ ಪೈಪೋಟಿ ನಡೆಸುತ್ತಿದೆ ಎಂದು ವ್ಯಂಗ್ಯವಾಡಿದರು. ನಗರಸಭಾ ಸದಸ್ಯ ಹಾಗೂ ನಗರ ಬಿಜೆಪಿ ಅಧ್ಯಕ್ಷ ಉಮೇಶ್ ಸುಬ್ರಮಣಿ ಮಾತನಾಡಿ, ಕಾಂಗ್ರೆಸ್ ನಲ್ಲಿ ನೆಲೆ ಇಲ್ಲದವರು ವಿನಾಕಾರಣ ಬಿಜೆಪಿ ವಿರುದ್ಧ ಹುಳುಕು ಕಂಡು ಹಿಡಿಯುತ್ತಿದ್ದಾರೆ. ಶಾಸಕರ ಹೆಸರು ಹೇಳಿಕೊಂಡು ಹೈಜಾಕ್ ಮಾಡುತ್ತಿದ್ದಾರೆ ಎಂದು ಆರೋಪಿಸಿದರು. ವೈಯುಕ್ತಿಕ ವಿಚಾರಗಳನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಲಾಗುತ್ತಿದೆ. ನಿಯಮಬಾಹಿರ ಶೆಡ್‍ಗಳ ಬಗ್ಗೆ ನನ್ನ ವಿರುದ್ಧ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ ನಗರದಲ್ಲಿ ಸುಮಾರು 39 ಅನಧಿಕೃತ ಶೆಡ್‍ಗಳಿವೆ ಎಂದರು. ನಗರಸಭಾ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ, ನಿಯಮ ಬಾಹಿರ ಶೆಡ್‍ಗಳ ಕುರಿತು ಮುಂದಿನ ಸಭೆಯಲ್ಲಿ ಚರ್ಚಿಸಲಾಗುವುದು ಎಂದು ತಿಳಿಸಿದರು. ಸದಸ್ಯ ಅರುಣ್ ಶೆಟ್ಟಿ ಮಾತನಾಡಿ, ಶಾಸಕರ ಹೆಸರು ಹಾಳು ಮಾಡಲು ರೋಲ್‍ಕಾಲ್‍ನಲ್ಲಿ ತೊಡಗಿರುವ ವ್ಯಕ್ತಿಗಳು ಮುಂದಿನ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸದಸ್ಯರಾಗಿ ಆಯ್ಕೆಯಾಗಿ ಬರಲೆಂದು ಸವಾಲೆಸೆದರು. ಸುದ್ದಿಗೋಷ್ಠಿಯಲ್ಲಿ ಸದಸ್ಯೆ ಎ.ಕೆ.ಸಬಿತಾ ಹಾಗೂ ನಗರ ಬಿಜೆಪಿ ಉಪಾಧ್ಯಕ್ಷ ಮನು ಮಂಜುನಾಥ್ ಉಪಸ್ಥಿತರಿದ್ದರು.









