
ಮಡಿಕೇರಿ ಸೆ.22 NEWS DESK : ರಸ್ತೆ ಅವ್ಯವಸ್ಥೆಯನ್ನು ಖಂಡಿಸಿ ಸೆ.24 ರಂದು ಜಿಲ್ಲೆಯ ಪ್ರಮುಖ ಪಟ್ಟಣ ಪ್ರದೇಶಗಳಲ್ಲಿ ಬೆಳಗ್ಗೆ 11 ರಿಂದ 12 ಗಂಟೆಯವರೆಗೆ ಏಕ ಕಾಲಕ್ಕೆ ರಸ್ತೆ ತಡೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ. ಈ ಹೋರಾಟ ರಾಜ್ಯವ್ಯಾಪಿ ನಡೆಯಲಿದೆ ಎಂದು ವಿಧಾನಸಭೆಯ ಮಾಜಿ ಅಧ್ಯಕ್ಷ ಕೆ.ಜಿ.ಬೋಪಯ್ಯ ಅವರು ತಿಳಿಸಿದ್ದಾರೆ. ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಳೆಯಿಂದಷ್ಟೆ ರಸ್ತೆಗಳು ಹದಗೆಟ್ಟಿದೆ ಎಂದರೆ ಅದು ಸಮರ್ಥನೀಯವಲ್ಲ. ಜಿಲ್ಲೆಯಲ್ಲಿ 2018ರಿಂದ ನಿರಂತರವಾಗಿ ಪ್ರತಿ ವರ್ಷ ಅಧಿಕ ಮಳೆಯಾಗುತ್ತಿದೆ. ಹೀಗಿದ್ದೂ ಹಿಂದಿನ ಬಿಜೆಪಿ ಅವಧಿಯಲ್ಲಿ ಆಯಾ ಸಂದರ್ಭಗಳಲ್ಲಿ ದುರಸ್ತಿ ಕಾರ್ಯಗಳೊಂದಿಗೆ ರಸ್ತೆಗಳನ್ನು ವ್ಯವಸ್ಥಿತವಾಗಿ ಇಡುವ ಪ್ರಯತ್ನ ನಡೆಯುತಿತ್ತು. ಆದರೆ, 2023 ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಬಳಿಕ ಇಲ್ಲಿಯವರೆಗು ರಸ್ತೆಗಳ ಕನಿಷ್ಟ ನಿರ್ವಹಣಾ ಕಾರ್ಯವೂ ಇಲ್ಲದೆ, ಬಹುತೇಕ ರಸ್ತೆಗಳು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿರುವುದಾಗಿ ಆರೋಪಿಸಿದರು. *ಮೋದಿ ಕೊಡುಗೆ* ನವರಾತ್ರಿ ಉತ್ಸವದ ಆರಂಭದಲ್ಲೆ ಪ್ರಧಾನಿ ನರೇಂದ್ರ ಮೊದಿ ಅವರು ಬಡವರ್ಗ ಮತ್ತು ಮಧ್ಯಮ ವರ್ಗವನ್ನು ಕೇಂದ್ರೀಕರಿಸಿ ಜಿಎಸ್‍ಟಿ ತೆರಿಗೆಯನ್ನು ಇಳಿಸುವ ಮೂಲಕ ಉತ್ಸವದ ಕೊಡುಗೆಯನ್ನು ನೀಡಿದ್ದಾರೆ. ಇದರಿಂದ ಜೀವ ಸಂರಕ್ಷಕ ಔಷಧಿಯೊಂದಿಗೆ 375 ನಿತ್ಯೋಪಯೋಗಿ ವಸ್ತಗಳ ದರ ಇಳಿದಿದೆ. ಇದರಿಂದ ರಾಷ್ಟ್ರದ ಜನತೆಯ 1.50 ಲಕ್ಷ ಕೋಟಿ ಹಣ ಉಳಿತಾಯವಾಗಿದೆಯೆಂದು ಸಂತಸ ವ್ಯಕ್ತಪಡಿಸಿದರು.
ಜಿಎಸ್‍ಟಿ ತೆರಿಗೆ ಇಳಿಕೆ ಕೇಂದ್ರ ಸರ್ಕಾರದ ಚರಿತ್ರಾರ್ಹ ನಿರ್ಧಾರವೆಂದು ಬಣ್ಣಿಸಿ, ಇದರಿಂದ ಮೋಟಾರು ವಾಹನಗಳ ದರ ಸೇರಿದಂತೆ, ಟ್ರ್ಯಾಕ್ಟರ್‍ನಿಂದ ಹಿಡಿದು ಕಿಟನಾಶಕಗಳವರೆಗೆ ಕೃಷಿ ಬಳಕೆಯ ಯಂತ್ರೋಪಕರಣಗಳು ಮತ್ತು ಸಾಮಗ್ರಿಗಳ ಬೆಲೆಯೂ ಇಳಿಕೆಯಾಗಿದೆಯೆಂದು ತಿಳಿಸಿದರು.
ಜಿಎಸ್‍ಟಿ ಇಳಿಕೆಯಿಂದ ರಾಜ್ಯದ ಕಾಂಗ್ರೆಸ್ ಸರ್ಕಾರ ಹೇಳಿವಂತೆ ಯಾವುದೇ ನಷ್ಟವಿಲ್ಲ. ಜಿಎಸ್‍ಟಿ ಮಂಡಳಿಯಲ್ಲಿ ಜಿಎಸ್‍ಟಿ ಇಳಿಕೆಗೆ ಸಮ್ಮತಿ ಸೂಚಿಸಿದ ಇದೇ ಕಾಂಗ್ರೆಸ್ ಪ್ರಮುಖರು, ಇದೀಗ ಜಿಎಸ್‍ಟಿ ವಿರುದ್ಧ ಬೊಗಳೆ ಹೊಡೆಯುತ್ತಿದ್ದಾರಷ್ಟೆ ಎಂದು ಲೇವಡಿ ಮಾಡಿ, ಜಿಎಸ್‍ಟಿ ತೆರಿಗೆ ಇಳಿಸಿದ್ದರಿಂದ ರಾಜ್ಯಕ್ಕೆ ಯಾವುದೇ ನಷ್ಟವಿಲ್ಲವೆಂದರು. *ಹಿಂದೂ ಎಂದು ನಮೂದಿಸಿ* ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಅವರು ಮಾತನಾಡಿ, ಜಾತಿ ಗಣತಿ ಹಿನ್ನೆಲೆಯಲ್ಲಿ ‘ಕೊಡವ ಧರ್ಮ’ ಪ್ರಸ್ತಾಪವಾಗುತ್ತಿದೆ. ಆದರೆ, ಇದಕ್ಕೆ ಯಾವುದೇ ಮಾನ್ಯತೆ ಇಲ್ಲ. ಗಣತಿಯಲ್ಲಿ ಕೊಡವ ಧರ್ಮವೆಂದು ನಮೂದಿಸಿದರೆ ಅದು ಕೇವಲ ‘ಇತರೆ’ ಎಂದಷ್ಟೆ ಪರಿಗಣಿಸಲಾಗುತ್ತದೆ. ಈ ಹಿನ್ನೆಲೆ ಕೊಡವರು ‘ಹಿಂದೂ’ ಧರ್ಮವೆಂದೇ ನಮೂದಿಸಬೇಕೆಂದು ಮನವಿ ಮಾಡಿದರು. ರಾಜ್ಯ ಕಾಂಗ್ರೆಸ್ ಸರಕಾರ ಕಾಫಿ ಬೆಳೆ ಹಾನಿಗೆ ಸಂಬಂಧಿಸಿದಂತೆ ತಕ್ಷಣ ಪರಿಹಾರ ಒದಗಿಸಬೇಕು, ವನ್ಯಮೃಗಗಳ ಹಾವಳಿ ತಡೆಗೆ ಕ್ರಮ ಕೈಗೊಳ್ಳಬೇಕೆಂದು ಆಗಹಿಸಿದರು.
ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಚಲನ್ ಮಾತನಾಡಿ, ಅಖಿಲ ಕೊಡವ ಸಮಾಜ ಕೊಡವರು ‘ಕೊಡವ ಧರ್ಮ’ಕ್ಕೆ ಸೇರಿದವರು ಎನ್ನುವ ತನ್ನ ನಿಲುವಿನಿಂದ ಹಿಂದಕ್ಕೆ ಸರಿಯಬೇಕೆಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಎಸ್‍ಟಿ ಮೋರ್ಚಾ ಜಿಲ್ಲಾಧ್ಯಕ್ಷ ಆರ್.ಕೆ. ಚಂದ್ರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಹಾಗೂ ಜಿಲ್ಲಾ ಉಪಾಧ್ಯಕ್ಷ ಮನು ಮಂಜುನಾಥ್ ಉಪಸ್ಥಿತರಿದ್ದರು.








