
ವಿರಾಜಪೇಟೆ ಸೆ.24 NEWS DESK : ವಿರಾಜಪೇಟೆ ಸಮೀಪದ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾಲಂಗಾಲದಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಬೆಳೆಗಾರರು ಆತಂಕ ಪಡುವಂತಾಗಿದೆ. ಕೆದಮುಳ್ಳುರು, ಪಾಲಂಗಾಲ, ಕರಡ, ನರಿಯಂದಡ, ಗ್ರಾಮದಲ್ಲಿ ಕಳೆದ ಕೆಲವು ತಿಂಗಳುಗಳಿಂದ ಕಾಡಾನೆಗಳ ಹಿಂಡು ಗ್ರಾಮದ ಬೆಳೆಗಾರರ ತೋಟಗಳಿಗೆ ಲಗ್ಗೆ ಇಟ್ಟು ದಾಂಧಲೆ ನಡೆಸಿ ಬೆಳೆಗಳನ್ನು ಹಾನಿಪಡಿಸಿದೆ. ಪಾಲಂಗಾಲ ಗ್ರಾಮದ ಬೆಳೆಗಾರರಾದ ಕರಿನೆರವಂಡ ಶಂಕರಿ ಹಾಗೂ ಇನ್ನಿತರರ ತೋಟಕ್ಕೆ ಲಗ್ಗೆ ಇಟ್ಟ ಕಾಡಾನೆಗಳು ಬಾಳೆ, ಅಡಿಕೆ, ತೆಂಗು, ಕಾಫಿ, ಕಾಳುಮೆಣಸು ಮತ್ತಿತರ ಕೃಷಿ ಗಿಡಗಳನ್ನು ತುಳಿದು ನಾಶ ಪಡಿಸಿ ಅಪಾರ ನಷ್ಟ ಉಂಟು ಮಾಡಿವೆ. ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬದಲ್ಲಿ ಅಳವಡಿಸಲಾಗಿದ್ದ ಸ್ವಿಚ್ಚನ್ನು ಹಾನಿಗೊಳಿಸಿದೆ. ನಿರಂತರ ಕಾಡಾನೆಗಳ ಹಾವಳಿಯಿಂದ ಗ್ರಾಮದಲ್ಲಿ ಗ್ರಾಮಸ್ಥರು ನಡೆದಾಡಲು ಭಯಪಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಎಂ.ಎಂ. ಪರಮೇಶ್ವರ ಮಾತನಾಡಿ, ತಕ್ಷಣವೇ ಸಂಬಂಧಪಟ್ಟ ಅರಣ್ಯ ಇಲಾಖೆ ಸೂಕ್ತ ಕ್ರಮ ಕೈಗೊಂಡು ಕಾಡಾನೆ ಗ್ರಾಮಕ್ಕೆ ನುಸುಳದ ರೀತಿಯಲ್ಲಿ ಶಾಶ್ವತ ಪರಿಹಾರ ಒದಗಿಸಬೇಕು. ಅದರಂತೆ ಕಾಡಾನೆ ದಾಳಿಯಿಂದ ನಷ್ಟ ಹೊಂದಿದ ಬೆಳೆಗಾರರಿಗೆ ಸೂಕ್ತ ಪರಿಹಾರ ಒದಗಿಸಬೇಕು. ಮಿತಿಮೀರಿದ ಕಾಡಾನೆಗಳ ಹಾವಳಿಯಿಂದ ಜನ ತತ್ತರಿಸಿ ಹೋಗಿದ್ದಾರೆ. ಅಪಾರ ಪ್ರಮಾಣದಲ್ಲಿ ಬೆಳೆ ನಷ್ಟದಿಂದ ಬೆಳೆಗಾರರು ಕಂಗಲಾಗಿದ್ದಾರೆ. ಅಧಿಕಾರಿಗಳು ನಾಮಾಕಾವಸ್ಥೆಗೆ ಕಾಡಾನೆಗಳನ್ನು ಕಾಡಿಗೆ ಅಟ್ಟುವ ಕೆಲಸ ಮಾಡುತ್ತಿದ್ದಾರೆ. ಇದರಿಂದ ಪುನಃ ಆನೆಗಳು ಮರಳಿ ನಾಡಿಗೆ ಬರುತ್ತಿವೆ. ಅರಣ್ಯ ಇಲಾಖೆ ಮತ್ತು ಸರಕಾರ ಸಾರ್ವಜನಿಕರ ಜೀವನದ ಜೊತೆ ಚೆಲ್ಲಾಟವಾಡದೆ ಆನೆಗಳ ಉಪಟಳಕ್ಕೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಇಲ್ಲದಿದ್ದಲ್ಲಿ ಕೆದಮುಳ್ಳುರು ಹಾಗೂ ಪಾಲಂಗಾಲ ವ್ಯಾಪ್ತಿಯ ಗ್ರಾಮಸ್ಥರು, ಬೆಳೆಗಾರರ ನೇತೃತ್ವದಲ್ಲಿ ತೀವ್ರತರದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಎಚ್ಚರಿಸಿದರು.









