
ಮಡಿಕೇರಿ ಸೆ.26 NEWS DESK : ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಸೇನಾನಿ ವೀರ ಭಗತ್ ಸಿಂಗ್ ಜನ್ಮದಿನದ ಪ್ರಯುಕ್ತ ಸೆ.28 ರಂದು ಆಮ್ ಆದ್ಮಿ ಪಾರ್ಟಿಯಿಂದ ಕೊಡಗು ಸೇರಿದಂತೆ ರಾಜ್ಯವ್ಯಾಪಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಕಾರ್ಯದರ್ಶಿ ಭೋಜಣ್ಣ ಸೋಮಯ್ಯ ತಿಳಿಸಿದ್ದಾರೆ. ಇದೇ ಸೆ.28 ರಂದು ರಾಜ್ಯಾದ್ಯಂತ ಆಮ್ ಆದ್ಮಿ ಪಾರ್ಟಿ “ಒಂದು ದಿನ ಭಗತ್ ಗಾಗಿ” ಎಂಬ ಘೋಷವಾಕ್ಯದೊಂದಿಗೆ ಭಗತ್ ಸಿಂಗ್ ಅವರ ಜನ್ಮದಿನವನ್ನು ಆಚರಿಸಲಿದೆ ಎಂದು ಅವರು ಪತ್ರಿಕಾ ಪ್ರಕಟಣೆ ನೀಡಿದ್ದಾರೆ. ಜಿಲ್ಲಾ, ತಾಲ್ಲೂಕು ಕೇಂದ್ರಗಳ ಪಕ್ಷದ ಕಛೇರಿಯಲ್ಲಿ ಭಗತ್ ಸಿಂಗ್ ಗೆ ಪುಷ್ಪನಮನ ಸಲ್ಲಿಸಿ, ಸಾಧಕರನ್ನು ಗುರುತಿಸಿ ಸನ್ಮಾನಿಸಲಾಗುವುದು. ಶಾಲಾ, ಕಾಲೇಜುಗಳಿಗೆ ಭೇಟಿ ನೀಡಿ ಭಗತ್ ಸಿಂಗ್ ಅವರ ಸ್ವಾತಂತ್ರ್ಯ ಹೋರಾಟ ಮತ್ತು ಆದರ್ಶಗಳ ಕುರಿತು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುವುದು. ಆಕಾಶವಾಣಿ, ಟಿವಿ ಮಾಧ್ಯಮ, ಪತ್ರಿಕಾ ಸಂವಾದ, ಬೈಕ್ ರ್ಯಾಲಿ ಮತ್ತಿತರ ಕಾರ್ಯಕ್ರಮಗಳು ನಡೆಯಲಿವೆ ಎಂದು ತಿಳಿಸಿದ್ದಾರೆ. ಪಕ್ಷದ ಕಾರ್ಯಕರ್ತರು ಮಾತ್ರವಲ್ಲದೆ ಸಾರ್ವಜನಿಕರು ಕೂಡ ಸಾಮಾಜಿಕ ಜಾಲತಾಣಗಳ ತಮ್ಮ ತಮ್ಮ ಖಾತೆಗಳಲ್ಲಿ ಭಗತ್ ಸಿಂಗ್ ಅವರ ಭಾವಚಿತ್ರ ಮತ್ತು ಆದರ್ಶಗಳನ್ನು ಹಂಚಿಕೊಳ್ಳಬೇಕು. ಡಿಪಿ ಮತ್ತು ಸ್ಟೇಟಸ್ ಗಳಲ್ಲಿ ಕೂಡ ವೀರ ದೇಶಭಕ್ತನ ಭಾವಚಿತ್ರವನ್ನು ಹಾಕಿ ಭಗತ್ ಸಿಂಗ್ ಅವರನ್ನು ವಿಶೇಷ ರೀತಿಯಲ್ಲಿ ಸ್ಮರಿಸಿಕೊಳ್ಳಬೇಕು ಮತ್ತು ಸ್ವಾತಂತ್ರ್ಯ ಸೇನಾನಿಯ ಪರಾಕ್ರಮದ ವಿಚಾರವನ್ನು ಹಂಚಿಕೊಳ್ಳಬೇಕು. ಆಮ್ ಆದ್ಮಿ ಪಾರ್ಟಿ ಆಯೋಜಿಸುವ ಕಾರ್ಯಕ್ರಮದಲ್ಲಿ ಸರ್ವರು ಪಾಲ್ಗೊಳ್ಳಬೇಕು ಎಂದು ಭೋಜಣ್ಣ ಸೋಮಯ್ಯ ಮನವಿ ಮಾಡಿದ್ದಾರೆ.










