
ಮಡಿಕೇರಿ NEWS DESK ಸೆ.26 : ಕರ್ನಾಟಕ ರಾಜ್ಯ ಸರಕಾರದ ವತಿಯಿಂದ ಪ್ರಸ್ತುತ ನಡೆಯುತ್ತಿರುವ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಸಮೀಕ್ಷೆ ಮತ್ತು ಜಾತಿ ಜನಗಣತಿಯಲ್ಲಿ ಹಾಗೂ ಕೇಂದ್ರ ಸರಕಾರ ನಡೆಸಲು ಉದ್ದೇಶಿಸಿರುವ ಜಾತಿ ಸಮೀಕ್ಷೆಗಳಲ್ಲಿ ಎಲ್ಲಾ ಅರೆಭಾಷಿಕ ಗೌಡರು ಧರ್ಮದ ಕಾಲಂನಲ್ಲಿ ಹಿಂದೂ ಎಂದು, ಜಾತಿಯ ಕಾಲಂನಲ್ಲಿ GOWDA (ಗೌಡ) ಎಂದು ನಮೂದಿಸುವಂತೆ ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಅಭಿವೃದ್ಧಿ ಸಂಘದ ಅಧ್ಯಕ್ಷ ಪೈಕೇರ ಮನೋಹರ್ ಮಾದಪ್ಪ ಅವರು ಮನವಿ ಮಾಡಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ರಾಜ್ಯ ಮತ್ತು ಕೇಂದ್ರ ಸರಕಾರದ ಎರಡೂ ಗಣತಿಯಲ್ಲೂ ಉಪಜಾತಿಯ ಕಾಲಂನಲ್ಲಿ ಅರೆಭಾಷೆ ಮಾತನಾಡುವವರು ಅರೆಭಾಷೆ ಗೌಡ, ತುಳುಭಾಷೆ ಮಾತನಾಡುವವರು ತುಳುಭಾಷೆ ಗೌಡ ಎಂದು ಹಾಗೂ ಮಾತೃಭಾಷೆಯ ಕಾಲಂನಲ್ಲಿ ಅರೆಭಾಷೆ/ ತುಳುಭಾಷೆ ಎಂದು ಕಡ್ಡಾಯವಾಗಿ ಬರೆಸುವಂತೆ ತಿಳಿಸಿದ್ದಾರೆ. ಈ ಕುರಿತು ಈಗಾಗಲೇ ದಕ್ಷಿಣ ಕನ್ನಡ ಮತ್ತು ಕೊಡಗು ಗೌಡ ಅಭಿವೃದ್ಧಿ ಸಂಘ ಅರೆಭಾಷೆ ಹಾಗೂ ತುಳುಭಾಷೆ ಗೌಡ ಸಮುದಾಯದ ಸಭೆಗಳನ್ನು ನಡೆಸಿ ವಿಸ್ತೃತವಾದ ಚರ್ಚೆಯನ್ನು ನಡೆಸಿದೆ. ಅಲ್ಲದೆ ಕೊಡಗು ಮತ್ತು ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಗೌಡ ಸಮಾಜಗಳೊಂದಿಗೆ ಸಮಾಲೋಚಿಸಿ ಕೊಡಗು ಗೌಡ ಸಮಾಜಗಳ ಒಕ್ಕೂಟ GOWDA (ಗೌಡ) ಎಂದು ನಮೂದಿಸಲು ಕೈಗೊಂಡಿರವ ನಿರ್ಣಯಕ್ಕೆ ಬೆಂಬಲವನ್ನು ಸೂಚಿಸಿದೆ ಎಂದು ಪೈಕೇರ ಮನೋಹರ್ ಮಾದಪ್ಪ ಸ್ಪಷ್ಟಪಡಿಸಿದ್ದಾರೆ.








