
ನಾಪೋಕ್ಲು ಸೆ.29 NEWS DESK : ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ 1982ನೇ ಶೈಕ್ಷಣಿಕ ವರ್ಷದ ವಿಜ್ಞಾನ, ಕಲಾ ಮತ್ತು ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳ ಪುನರ್ಮಿಲನ ಮತ್ತು ಸಂತೋಷ ಕೂಟ ಸಂಭ್ರಮದಿಂದ ನಡೆಯಿತು. ವಿರಾಜಪೇಟೆಯ ಕೊಡವ ಸಮಾಜ ಸಭಾಂಗಣದಲ್ಲಿ ಜರುಗಿದ ಕಾರ್ಯಕ್ರಮದಲ್ಲಿ ಸಂಭ್ರಮ ಮನೆ ಮಾಡಿತ್ತು. ಸೇರಿದವರು ಹಳೆಯ ನೆನಪುಗಳನ್ನು ಮೆಲಕು ಹಾಕಿದರು. 2021ರಲ್ಲಿ ಪ್ರಾರಂಭಗೊಂಡ ಹಳೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಸಂಭ್ರಮಿಸಿದ್ದು, ಆ ಅಭೂತಪೂರ್ವ ಪುನರ್ಮಿಲನಕ್ಕೆ ಒಂದು ವಿಶೇಷ ಮೆರುಗನ್ನು ನೀಡಿತ್ತು. ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ವಿವಿಧ ಆಟೋಟ, ಮನೋರಂಜನಾ ಚಟುವಟಿಕೆ ಮತ್ತು ಸ್ಪರ್ಧೆಗಳಲ್ಲಿ ತಮ್ಮ ದಿನದ ಜಂಜಾಟವನ್ನು ಮರೆತು ಕುಣಿದು ಕೊಪ್ಪಲಿಸಿ ಸಂಭ್ರಮಿಸಿದರು. ಪ್ರಾಸ್ತಾವಿಕ ಭಾಷಣ ಮಾಡಿದ ಹಳೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿ ಮುಂಡಂಡ ಸಿ.ನಾಣಯ್ಯ ತಮ್ಮ ಕಾಲೇಜು ದಿವಸಗಳ ಗತವೈಭವವನ್ನು ಮೆಲುಕು ಹಾಕುತ್ತಾ, ತಮ್ಮ ಸಹಪಾಠಿಗಳ ಸಾಮಾಜಿಕ ಕಳಕಳಿ ಮತ್ತು ಬದ್ಧತೆಯನ್ನು ಶ್ಲಾಘಿಸಿದರು. ಮುಂದಿನ ದಿನಗಳಲ್ಲಿ ಬಲಿಷ್ಠ ಹಾಗೂ ಸಮೃದ್ಧ ಸಮಾಜವನ್ನು ಕಟ್ಟುವ ಪರಿಕಲ್ಪನೆಯಡಿಯಲ್ಲಿ ಸಂಕಲ್ಪವನ್ನು ಮಾಡಬೇಕು ಎಂದರು. ಕಾರ್ಯಕ್ರಮದಲ್ಲಿ ಹಳೆಯ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ನವೀನ್, ಶ್ರೀಧರ್ ಹಾಗೂ ಉದ್ಯಮಿ ಎಸ್.ಹೆಚ್ .ಗಣೇಶ ಮಾತನಾಡಿ ಇದುವರೆಗೆ ವ್ಯವಸ್ಥಿತವಾಗಿ ನಡೆದ ಈ ಸುಂದರ ಸಂತೋಷ ಕೂಟ ಇನ್ನೂ ಹಲವಷ್ಟು ವರುಷಗಳ ಕಾಲ ನಡೆಯುವಂತಾಗಬೇಕು ಮತ್ತು ನಾವು ಈ ಸಮಾಜದ ಆದರ್ಶ ಪ್ರಜೆಗಳಾಗಿ ಬದುಕಬೇಕು ಎಂದರು. ಕಾರ್ಯಕ್ರಮದ ಆಯೋಜಕರಾದ ಹಳೆಯ ವಾಣಿಜ್ಯ ವಿಭಾಗದ ವಿದ್ಯಾರ್ಥಿ ಕಾಣತಂಡ ಕುಟ್ಟಪ್ಪ ನವರ ಕಾರ್ಯತತ್ಪರತೆ, ಶ್ರಮ ಎಲ್ಲರ ಮೆಚ್ಚುಗೆಯನ್ನು ಪಡೆಯಿತು. ಕಾರ್ಯಕ್ರಮದ ಪ್ರಾರ್ಥನೆಯನ್ನು ಹಳೆಯ ಕಲಾ ವಿಭಾಗದ ವಿದ್ಯಾರ್ಥಿನಿಯೂ, ಗೋಣಿಕೊಪ್ಪ ಲಯನ್ಸ್ ವಿದ್ಯಾಸಂಸ್ಥೆಯ ನಿವೃತ್ತ ಪ್ರಾಂಶುಪಾಲರಾದ ಚೋಕಿರ ಪವಿತ್ರ ಮಾಡಿದರು. ನಿರೂಪಣೆಯನ್ನು ಹಳೆಯ ಕಲಾ ವಿಭಾಗದ ವಿದ್ಯಾರ್ಥಿನಿಯೂ, ಪ್ರಸ್ತುತ ಬ್ರಹ್ಮಗಿರಿ ಪತ್ರಿಕೆಯ ಸಹ ಸಂಪಾದಕಿಯೂ ಆಗಿರುವ ಉಳ್ಳಿಯಡ ಡಾಟಿ ಪೂವಯ್ಯ ನೆರವೇರಿಸಿದರು. ಮುಂದಿನ ವರುಷದ ಕಾರ್ಯಕ್ರಮದ ಸಂಚಾಲಕರಾಗಿ ಹಳೆಯ ಕಲಾ ವಿಭಾಗದ ವಿದ್ಯಾರ್ಥಿ ಅಪ್ಪುಮಣಿಯಂಡ ಬನ್ಸಿ ಭೀಮಯ್ಯ ಆಯ್ಕೆ ಅವರನ್ನು ಆಯ್ಕೆ ಮಾಡಲಾಯಿತು.
ವರದಿ : ದುಗ್ಗಳ ಸದಾನಂದ.









