
ಮಡಿಕೇರಿ ಸೆ.29 NEWS DESK : ಹುದುಗೂರು ಸಮೀಪದ ಯಡವನಾಡು ಗ್ರಾಮದಲ್ಲಿ ಕಾಡಾನೆ ಹಾವಳಿ ಮಿತಿ ಮೀರಿದ್ದು, ಬೆಳೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ. ಗ್ರಾಮದ ಉಮೇಶ್ ರಾಜ್ ಅರಸ್ ಮತ್ತು ಜೆ.ಕೆ.ರವಿ ಎಂಬುವರ ಜಮೀನಿಗೆ ದಾಳಿ ಮಾಡಿರುವ ಕಾಡಾನೆಗಳ ಹಿಂಡು ಭತ್ತದ ಗದ್ದೆಗಳನ್ನು ತುಳಿದು ತಿಂದು ಬಾರಿ ನಷ್ಟ ಪಡಿಸಿವೆ. ಅಲ್ಲದೆ ಅನೇಕ ಅಡಿಕೆ ಗಿಡಗಳನ್ನು ಹಾಳು ಮಾಡಿದೆ. ಮೀಸಲು ಅರಣ್ಯ ಪ್ರದೇಶದಿಂದ ಗ್ರಾಮಕ್ಕೆ ಲಗ್ಗೆ ಇಡುತ್ತಿರುವ ಕಾಡಾನೆಗಳು ಕೃಷಿಕರ ಗದ್ದೆ, ತೋಟಗಳಿಗೆ ನುಗ್ಗಿ ಅಪಾರ ಪ್ರಮಾಣ ಬೆಳೆಗಳನ್ನು ಧ್ವಂಸ ಪಡಿಸಿ ನಷ್ಟ ಉಂಟು ಮಾಡುತ್ತಿದೆ ಎಂದು ಗ್ರಾಮಸ್ಥರು ಬೇಸರ ವ್ಯಕ್ತಪಡಿಸಿದರು. ಕಳೆದ ಸಾಲಿನಲ್ಲಿ ಬೆಳೆ ನಷ್ಟಗೊಳಗಾದವರಿಗೆ ಹುದುಗೂರು ಉಪ ವಲಯ ಅರಣ್ಯಾಧಿಕಾರಿಗಳು ಇದುವರೆಗೂ ಪರಿಹಾರವನ್ನು ನೀಡಿಲ್ಲ. ಅರಣ್ಯ ಇಲಾಖೆಯ ಅಧಿಕಾರಿಗಳು ಸಮರ್ಪಕವಾಗಿ ಸ್ಧಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸುವಂತೆ ರೈತರು ಆಗ್ರಹಿಸಿದ್ದಾರೆ.









