
ಮಡಿಕೇರಿ ಸೆ.30 NEWS DESK : ಪುಟಾಣಿ ಮಕ್ಕಳ ಸುಪ್ತ ಪ್ರತಿಭೆಯ ಅನಾವರಣದೊಂದಿಗೆ, ಸಾಮಾಜಿಕ ವ್ಯವಹಾರಗಳ ಕುರಿತು ಅವರಲ್ಲಿ ಅರಿವು ಮೂಡಿಸುವ ಮಕ್ಕಳ ಸಂತೆ ಸೇರಿದಂತೆ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ‘ಮಕ್ಕಳ ದಸರಾ ಉತ್ಸವ’ದ ಸಂಭ್ರಮ ಗಾಂಧಿ ಮೈದಾನದ ಉದ್ದಗಲಕ್ಕೂ ವ್ಯಾಪಿಸಿ ಸಂತಸ ಮೂಡಿಸಿತು. ಮಡಿಕೇರಿ ನಗರ ದಸರಾ ಸಮಿತಿ, ದಸರಾ ಜನೋತ್ಸವ ಸಾಂಸ್ಕೃತಿಕ ಸಮಿತಿ ವತಿಯಿಂದ ರೋಟರಿ ಮಿಸ್ಟಿ ಹಿಲ್ಸ್ ಸಹಯೋಗದಲ್ಲಿ ಮಕ್ಕಳ ಸಂತೆ ನಡೆಯಿತು. ನಗರದ ಗಾಂಧಿ ಮೈದಾನದಲ್ಲಿ ನಡೆದ ಮಕ್ಕಳ ಸಂತೆಯಲ್ಲಿ ಮಕ್ಕಳ ವ್ಯಾಪಾರ, ವ್ಯವಹಾರ ವಹಿವಾಟು ಜೋರಾಗಿಯೇ ನಡೆಯಿತು. ಅತ್ಯಧಿಕ ವಿದ್ಯಾರ್ಥಿಗಳ ತಂಡವು ನೋಂದಣಿ ಮಾಡಿಕೊಂಡು ಮಕ್ಕಳ ಸಂತೆಯಲ್ಲಿ ಪಾಲ್ಗೊಂಡಿದ್ದು ವಿಶೇಷವಾಗಿತ್ತು. ಪಾಲಕ್, ಮೆಂತೆ, ಸಬ್ಸಿಗೆ, ದಂಡು, ಕೀರೆ, ಗಣಿಕೆ, ನೊಗ್ಗೆ, ಬಸಳೆ, ಎಲೆಕೋಸು, ವೀಳ್ಯದೆಲೆಯಿಂದ ಹಿಡಿದು ಎಲ್ಲಾ ರೀತಿಯ ಸೊಪ್ಪುಗಳು, ತರಕಾರಿ ವಿಭಾಗದಲ್ಲಿ ಕುಂಬಳ, ಬೂದುಕುಂಬಳ, ಸೌತೆಕಾಯಿ, ಸೋರೆಕಾಯಿ ವಿವಿಧ ರೀತಿಯ ತರಕಾರಿಗಳು, ಹಣ್ಣುಗಳಲ್ಲಿ ಬಾಳೆ, ಕಿತ್ತಳೆ, ಚಕೋತಾ, ಸೇಬು, ಮತ್ತೊಂದು ಬದಿಯಲ್ಲಿ ಪಾನಿಪೂರಿ, ಮಸಾಲಪೂರಿ, ಸೇರಿದಂತೆ ವಿವಿಧ ರೀತಿಯ ತಂಪು ಪಾನೀಯ ಹೀಗೆ ಒಂದು ಬದಿಯಲ್ಲಿ ಸೊಪ್ಪು ತರಕಾರಿ ಇದ್ದರೆ, ಮತ್ತೊಂದು ಬದಿಯಲ್ಲಿ ತಿಂಡಿ ತಿನಿಸು ವ್ಯಾಪಾರ ಎಲ್ಲರನ್ನು ಆಕರ್ಷಣಿಯಗೊಳಿಸಿತು. ಜೊತೆಗೆ ತಿಂಡಿ ತಿನಿಸುಗಳು ಪ್ರತಿಯೊಬ್ಬರ ಬಾಯಲ್ಲಿ ನೀರು ಭರಿಸುವಂತೆ ಮಾಡಿತ್ತು. ಮಕ್ಕಳ ಸಂತೆ ಸಂದರ್ಭದಲ್ಲಿ ಮಡಿಕೇರಿ ದಸರಾ ಮಂಟಪವೇ ಕಣ್ತುಂಬಿಕೊಳ್ಳುವಂತೆ ಕಿರುಮಂಟಪ ಮಾದರಿಯಲ್ಲಿ ಐತಿಹಾಸಿಕ ಸಂದೇಶ ಸಾರಿದ್ದು ವಿಶೇಷವಾಗಿತ್ತು, ಪೌರಾಣಿಕ ಮಂಟಪ ಮೂಲಕ ಚಿತ್ರಣ ಗಮನ ಸೆಳೆಯಿತು. ಕಾರ್ಯಕ್ರಮನ್ನು ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ, ಮಕ್ಕಳ ವ್ಯಾಪಾರ ವಹಿವಾಟಿನ ಬಗ್ಗೆ ತಿಳಿದುಕೊಳ್ಳಲು ಮಕ್ಕಳ ಸಂತೆ ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದು ವಿಶೇಷವಾಗಿದೆ ಎಂದು ಹೇಳಿದರು.








